ADVERTISEMENT

HDK ಜನತಾ ದರ್ಶನ | ಶಿಷ್ಟಾಚಾರದಂತೆ ಸುತ್ತೋಲೆ ಹೊರಡಿಸಿದ್ದಾರೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 11:12 IST
Last Updated 5 ಜುಲೈ 2024, 11:12 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ನಡೆಸಿದ ಜನತಾ ದರ್ಶನದಲ್ಲಿ ಪಾಲ್ಗೊಳ್ಳದಂತೆ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವುದು ನಾನಲ್ಲ. ಶಿಷ್ಟಾಚಾರದಂತೆ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ನಾನು ಹಮ್ಮಿಕೊಂಡ ಜನತಾದರ್ಶನಕ್ಕೆ ಬಾರದಂತೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ’ ಎಂಬ ಕುಮಾರಸ್ವಾಮಿ ಅವರ ಆರೋಪದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಅದು ಕುಮಾರಸ್ವಾಮಿ ಅವರಿಗಾಗಿ ಹೊರಡಿಸಿದ ಸುತ್ತೋಲೆಯಲ್ಲ. ಹಿಂದಿನಿಂದಲೂ ನಡೆದು ಬಂದಿರುವ ಕ್ರಮ. ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಪ್ರಗತಿ ಪರಿಶೀಲನೆ ಸಭೆ ನಡೆಸುವುದಕ್ಕೂ ಬಿಟ್ಟಿರಲಿಲ್ಲ’ ಎಂದರು.

ಜನ ಇಟ್ಟುಕೊಂಟು ಮಾಡಲಿ: ಇದೇ ವಿಷಯ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಜನರನ್ನು ಇಟ್ಟುಕೊಂಡು ಜನತಾ ದರ್ಶನ ಮಾಡಲಿ. ಹಳ್ಳಿ, ಹಳ್ಳಿಯನ್ನೂ ತಿರುಗಲಿ. ಯಾರು ಬೇಡ ಅಂದವರು? ನಾವು ಬೇಡ ಅನ್ನಲು ಆಗುತ್ತದಾ’ ಎಂದು ಕೇಳಿದರು.

ADVERTISEMENT

‘ಕೇಂದ್ರ ಸಚಿವ ಮತ್ತು ಸಂಸದರಿಗೆ ಏನು ಗೌರವ ಕೊಡಬೇಕೋ ಅದನ್ನು ಅಧಿಕಾರಿಗಳು ಕೊಡುತ್ತಾರೆ. ನಾವು ದೆಹಲಿಗೆ ಹೋಗಿ ಅಲ್ಲಿಯೂ ಬೇರೆ ರೀತಿಯ ಗೌರವ ನಿರೀಕ್ಷಿಸಲು ಆಗುತ್ತದಾ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.