ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಭಾನುವಾರ ಭೇಟಿ ಮಾಡಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರು ಜೆಡಿಎಸ್– ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು. ಐದು ವರ್ಷಗಳಿಂದ ಸುಮಲತಾ ಮತ್ತು ಕುಮಾರಸ್ವಾಮಿ ಮಧ್ಯೆ ಮಾತುಕತೆ ಇರಲಿಲ್ಲ. ರಾಜಕೀಯವಾಗಿ ಶತಾಯಗತಾಯ ವಿರೋಧಿಸುವ ಹಂತಕ್ಕೆ ತಲುಪಿದ್ದರು.
ಸುಮಲತಾ ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ತಯಾರಿ ನಡೆಸಿದ್ದರು. ಎನ್‌ಡಿಎ ಮೈತ್ರಿಕೂಟ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟ ಬಳಿಕ ಮುಂದಿನ ರಾಜಕೀಯ ನಡೆ ಕುರಿತು ನಿರ್ಧಾರ ಪ್ರಕಟಿಸಿಲ್ಲ. ಜೆ.ಪಿ.ನಗರದಲ್ಲಿರುವ ಸುಮಲತಾ ಮನೆಗೆ ಭಾನುವಾರ ಸಂಜೆ ಭೇಟಿ ನೀಡಿದ್ದ ಕುಮಾರಸ್ವಾಮಿ, ಕೆಲಕಾಲ ಮಾತುಕತೆ ನಡೆಸಿದರು. ಅಭಿಷೇಕ್ ಅಂಬರೀಷ್ ಅವರೂ ಜತೆಗಿದ್ದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ‘ಅತ್ಯಂತ ಸೌಹಾರ್ದಯುತವಾಗಿ ಭೇಟಿಯಾಗಿದ್ದೇನೆ. ಅಂಬರೀಷ್ ಅಣ್ಣನ ಮನೆ ನನಗೆ ಹೊಸತಲ್ಲ. ನಾನು, ಅಂಬರೀಷ್ ಒಟ್ಟಿಗೆ ಉಂಡು ಬೆಳೆದವರು. ಮಂಡ್ಯದಲ್ಲಿ ಬೆಂಬಲ ನೀಡುವಂತೆ ಅವರನ್ನು ಕೇಳಿದ್ದೇನೆ. ಬುಧವಾರ (ಏಪ್ರಿಲ್ 3) ಮಂಡ್ಯದಲ್ಲಿ ಬೆಂಬಲಿಗರ ಸಭೆ ಕರೆದಿದ್ದು, ಅಲ್ಲಿ ಚರ್ಚಿಸಿ ನಿರ್ಧಾರ ಮಾಡುವುದಾಗಿ ತಿಳಿಸಿದ್ದಾರೆ’ ಎಂದರು.
‘ಏ.4ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ನಾಮಪತ್ರ ಸಲ್ಲಿಕೆ ದಿನ ಅಕ್ಕ ಅವರ ಸಹಕಾರ ಕೇಳಿದ್ದೇನೆ. ಬಿಜೆಪಿ ವರಿಷ್ಠರು ಮತ್ತು ಬಿ.ಎಸ್. ಯಡಿಯೂರಪ್ಪ ಕೂಡ ಸುಮಲತಾ ಜತೆ ಚರ್ಚಿಸಿದ್ದಾರೆ’ ಎಂದು ಹೇಳಿದರು.
ಸಭೆ ಬಳಿಕ ನಿರ್ಧಾರ: ‘ಕುಮಾರಸ್ವಾಮಿ ಅವರ ಜತೆ ಆರೋಗ್ಯಕರ ಚರ್ಚೆ ನಡೆದಿದೆ. ಮಂಡ್ಯ ಕ್ಷೇತ್ರದಲ್ಲಿ ಸಹಕಾರ ನೀಡುವಂತೆ ಕೇಳಿದ್ದಾರೆ. ಹಳೆಯದೆಲ್ಲವನ್ನೂ ಮರೆತು ಬಿಡುವಂತೆಯೂ ಹೇಳಿದರು’ ಎಂದು ಸುಮಲತಾ ಸುದ್ದಿಗಾರರಿಗೆ ತಿಳಿಸಿದರು.
‘ಮಂಡ್ಯದಲ್ಲಿ ಬುಧವಾರ ಸಭೆ ಕರೆದಿದ್ದೇನೆ. ಸಭೆಯಲ್ಲಿ ದರ್ಶನ್ ಮತ್ತು ಅಭಿಷೇಕ್ ಕೂಡ ಇರುತ್ತಾರೆ. ಬೆಂಬಲಿಗರ ಅಭಿಪ್ರಾಯ ಆಲಿಸಿದ ಬಳಿಕ ತೀರ್ಮಾನ ಪ್ರಕಟಸುವುದಾಗಿ ತಿಳಿಸಿದ್ದೇನೆ. ಬುಧವಾರ ಮಂಡ್ಯದಲ್ಲೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ’ ಎಂದರು.
‘ಡಿಕೆಶಿ ನನ್ನ ದೊಡ್ಡ ಹಿತೈಷಿ’ ‘ಡಿ.ಕೆ.ಶಿವಕುಮಾರ್ ಅವರು ನನ್ನ ದೊಡ್ಡ ಹಿತೈಷಿಗಳು. ಅವರಂತಹ ಹಿತೈಷಿಗಳು ನನಗೆ ಯಾರೂ ಇಲ್ಲ’ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಸುಮಲತಾ ಭೇಟಿ ಕುರಿತು ಶಿವಕುಮಾರ್ ಟೀಕೆಗೆ ಉತ್ತರಿಸಿದ ಅವರು ‘ಅವರು ಪಾಪ; ಅವರೇನೂ ವೈರಿಯಲ್ಲ ನನಗೆ. ಶಿವಕುಮಾರ್ ರೀತಿಯ ಹಿತೈಷಿಗಳೇ ಇಲ್ಲ’ ಎಂದರು.
ಸುಮಲತಾ ತೀರ್ಮಾನಿಸಲಿ: ಡಿಕೆಶಿ ‘ಸಂಸದೆ ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ನಿರ್ಧಾರವನ್ನು ಸ್ಥಳೀಯ ನಾಯಕರಿಗೆ ಬಿಡುತ್ತೇವೆ. ಸ್ಥಳೀಯ ಮಟ್ಟದಲ್ಲಿ ಎಲ್ಲರೂ ಒಪ್ಪಿದಾಗ ಹೈಕಮಾಂಡ್ ಯಾರನ್ನೂ ಕೈ ಬಿಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸುಮಲತಾ ಅವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಮತ್ತು ಅವರ ಮಧ್ಯೆ ನಡೆದ ಮಾತಿನ ಕಾಳಗ ಹಾಗೂ ಸ್ವಾಭಿಮಾನದ ಹೆಸರಲ್ಲಿ ಅವರು ಮತಯಾಚನೆ ಮಾಡಿದ್ದಕ್ಕೆ ಬದ್ಧರಿದ್ದರೆ ಪಕ್ಷಕ್ಕೆ ಕರೆತರುವ ಬಗ್ಗೆ ಆಲೋಚನೆ ಮಾಡಬಹುದು. ಅವರ ಬದ್ಧತೆ ಬದಲಾಗದಿದ್ದರೆ ನಾವು ಏನೂ ಮಾಡಲು ಸಾಧ್ಯವಿಲ್ಲ’ ಎಂದರು. ‘ಕಾಂಗ್ರೆಸ್‌ನಿಂದ ಆಹ್ವಾನವಿದೆ. ನಾನು ಇನ್ನೂ ತೀರ್ಮಾನ ಮಾಡಿಲ್ಲ’ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ಅವರಿಗೆ ಸಹಾಯ ಮಾಡಿದವರ ಉಪಕಾರ ತೀರಿಸಬೇಕು ಎಂದಿದ್ದರೆ ಅವರು ತೀರ್ಮಾನ ಮಾಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.