ಬೆಂಗಳೂರು: ಕೇಂದ್ರ ಆರೋಗ್ಯ ಸಚಿವಾಲಯ ಹಮ್ಮಿಕೊಂಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್–6) ರಾಜ್ಯದಲ್ಲಿ ಪೂರ್ಣಗೊಂಡಿದ್ದು, 26 ಸಾವಿರ ಕುಟುಂಬಗಳ ಮಾಹಿತಿ ಕಲೆ ಹಾಕಲಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು, ಜನರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ತಿಳಿಯಲು ಈ ಸಮೀಕ್ಷೆ ಸಹಕಾರಿಯಾಗಿದೆ. ಇದೇ ಮೊದಲ ಬಾರಿಗೆ ಕರ್ನಾಟಕವನ್ನು ಉತ್ತರ ಮತ್ತು ದಕ್ಷಿಣವೆಂದು ವಿಂಗಡಿಸಿ, ಸಮೀಕ್ಷೆ ನಡೆಸಲಾಗಿದೆ. ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಸಮೀಕ್ಷೆ ನಡೆದಿದೆ. ಮುಂಬೈನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಾಪ್ಯುಲೇಷನ್ ಸೈನ್ಸ್ (ಐಐಪಿಎಸ್) ಉತ್ತರ ಭಾಗದಲ್ಲಿ ಹಾಗೂ ಇಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ (ಐಸೆಕ್) ಜನಸಂಖ್ಯಾ ಸಂಶೋಧನಾ ಕೇಂದ್ರ ದಕ್ಷಿಣ ಭಾಗದ ಮಾಹಿತಿ ಕಲೆ ಹಾಕಿದೆ.
ಆರನೇ ಸುತ್ತಿನ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಆರೋಗ್ಯ ಸಂಬಂಧಿ ಮಾಹಿತಿ ಸಂಗ್ರಹಿಸಲು ವಿವಿಧ ವೈದ್ಯಕೀಯ ಪರೀಕ್ಷೆಗಳನ್ನೂ ನಡೆಸಲಾಗಿದೆ. ನೀರು, ನೈರ್ಮಲ್ಯ, ಅಡುಗೆ ಎಣ್ಣೆ, ಕೈತೊಳೆಯುವ ವ್ಯವಸ್ಥೆ ಸೇರಿ ಕುಟುಂಬಕ್ಕೆ ಸಂಬಂಧಿಸಿದ ವಿವಿಧ ಮಾಹಿತಿ ಸಂಗ್ರಹಿಸಲಾಗಿದೆ. ಮಹಿಳೆಯರಿಗೆ ಸಂಬಂಧಿಸಿದಂತೆ ಸುರಕ್ಷತೆ, ಆರ್ಥಿಕತೆ, ಕುಟುಂಬ ಯೋಜನೆ, ಪೌಷ್ಟಿಕತೆ ಒಳಗೊಂಡಂತೆ ಹಲವು ವಿವರ ಕಲೆ ಹಾಕಲಾಗಿದೆ. ಅದೇ ರೀತಿ, ಪುರುಷರಿಗೆ ಮದ್ಯಪಾನ, ಧೂಮಪಾನ, ಸಾಂಕ್ರಾಮಿಕವಲ್ಲದ ರೋಗಗಳು ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಕೋವಿಡ್ ಬಗ್ಗೆಯೂ ಅಧ್ಯಯನ
ಈ ಸಮೀಕ್ಷೆಯಲ್ಲಿ ಕೋವಿಡ್ ಕಾಯಿಲೆಯನ್ನು ಸೇರ್ಪಡೆ ಮಾಡಲಾಗಿತ್ತು. ಕೋವಿಡ್‌ನಿಂದ ಅಸ್ವಸ್ಥಗೊಂಡವರ ವಿವರ, ಚಿಕಿತ್ಸೆಗೆ ಮಾಡಲಾದ ವೆಚ್ಚ, ಆಸ್ಪತ್ರೆ ಅವಧಿ, ಮರಣ, ಈ ಕಾಯಿಲೆಯಿಂದ ಉಂಟಾದ ಆರ್ಥಿಕ ಹೊರೆ, ಲಸಿಕೆಯ ಪರಿಣಾಮದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ. ಭರ್ತಿ ಮಾಡಿದ ಪ್ರಶ್ನಾವಳಿಯ ಪ್ರತಿಗಳನ್ನು ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಲಾಗಿದೆ.
‘ಈ ಸಮೀಕ್ಷೆಯನ್ನು ಕಳೆದ ಫೆಬ್ರುವರಿಯಲ್ಲಿ ಪ್ರಾರಂಭಿಸಲಾಗಿತ್ತು. ತಲಾ ಏಳು ಜನರನ್ನು ಒಳಗೊಂಡ 14 ತಂಡಗಳು ದಕ್ಷಿಣ ಕರ್ನಾಟಕದ ವ್ಯಾಪ್ತಿಯಲ್ಲಿನ 15 ಜಿಲ್ಲೆಗಳಿಂದ 13,200 ಕುಟುಂಬಗಳನ್ನು ಸಮೀಕ್ಷೆ ನಡೆಸಿವೆ. ಉಳಿದ ಕುಟುಂಬಗಳು ಉತ್ತರ ಭಾಗಕ್ಕೆ ಸೇರ್ಪಡೆಯಾಗಿದ್ದವು. ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ನೆರವು ನೀಡಿದ್ದರಿಂದ ಅಗತ್ಯ ಮಾಹಿತಿ ಸಂಗ್ರಹಿಸಲು ಸಾಧ್ಯವಾಯಿತು’ ಎಂದು ಐಸೆಕ್ ಜನಸಂಖ್ಯಾ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಹಾಗೂ ಸಮೀಕ್ಷೆಯ ಯೋಜನಾ ನಿರ್ದೇಶಕ ಸಿ.ಎಂ. ಲಕ್ಷ್ಮಣ ತಿಳಿಸಿದರು.
ವರ್ಷಾಂತ್ಯಕ್ಕೆ ವರದಿ ನಿರೀಕ್ಷೆ
ದೇಶದಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. 1992–93ರಲ್ಲಿ ಮೊದಲ ಸಮೀಕ್ಷೆ ನಡೆಸಲಾಗಿತ್ತು. 2019–21ರಲ್ಲಿ ಐದನೇ ಸುತ್ತಿನ ಸಮೀಕ್ಷೆ ನಡೆದಿತ್ತು. ಈ ಸಮೀಕ್ಷೆಯು ದೇಶದ ಜನರ ಆರೋಗ್ಯ ಸ್ಥಿತಿಗತಿ ಕುರಿತು ಬೆಳಕು ಚೆಲ್ಲಲಿದೆ. ಈ ದತ್ತಾಂಶವು ಸಂಶೋಧನೆಗಳಿಗೂ ಸಹಕಾರಿಯಾಗಲಿದೆ. ತಾಯಂದಿರ ಹಾಗೂ ಶಿಶು ಮರಣ ಅಪೌಷ್ಟಿಕತೆ ಮತ್ತು ರಕ್ತ ಹೀನತೆ ತಗ್ಗಿಸಲು ಸಹ ಈ ಸಮೀಕ್ಷೆ ಪೂರಕವಾಗಲಿದೆ. ಆರೋಗ್ಯ ಸಚಿವಾಲಯವು ದೇಶದ ಎಲ್ಲ ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ವರ್ಷಾಂತ್ಯಕ್ಕೆ ವರದಿ ಬಿಡುಗಡೆ ಮಾಡುವ ನಿರೀಕ್ಷೆಯಿಂದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಈ ಬಾರಿಯ ಸಮೀಕ್ಷೆಯಲ್ಲಿ ಕೋವಿಡ್ ಸೇರಿ ಹೊಸ ವಿಷಯಗಳಿದ್ದವು. ಕ್ಷೇತ್ರ ಪರಿವೀಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ನಿಗದಿತ ಗಡುವಿನೊಳಗೆ ಸಮೀಕ್ಷೆ ನಡೆಸಿದ್ದೇವೆ.ಸಿ.ಎಂ. ಲಕ್ಷ್ಮಣ, ಐಸೆಕ್ ಜನಸಂಖ್ಯಾ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.