ADVERTISEMENT

ಆರೋಗ್ಯ ಇಲಾಖೆ: ಮರು ನೇಮಕಕ್ಕೆ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 20:53 IST
Last Updated 8 ಏಪ್ರಿಲ್ 2022, 20:53 IST
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ನೌಕರರು ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ನೌಕರರು ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಆರೋಗ್ಯ ಇಲಾಖೆ ಅಡಿಖಾಲಿ ಇರುವ ವಿವಿಧ ಹುದ್ದೆಗಳಿಗೆ ಮರು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿಮೂರು ಸಾವಿರಕ್ಕೂ ಅಧಿಕ ನೌಕರರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೋವಿಡ್‌ ನಿರ್ವಹಣೆಗೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ 6,463 ನೌಕರರ ಸೇವಾ ಅವಧಿ ಮಾ.31ಕ್ಕೆ ಅಂತ್ಯವಾಗಿದೆ. ಅವರ ಗುತ್ತಿಗೆ ಅವಧಿಯನ್ನು ಇದೇ ಜೂ.30ರವರೆಗೆ ವಿಸ್ತರಿಸುವ ಬಗ್ಗೆ ಇಲಾಖೆಯ ಆಯುಕ್ತರು ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಕೋವಿಡ್ ನಿಯಂತ್ರಣದ ಕಾರಣ ನೀಡಿ, ಪ್ರಸ್ತಾವನೆ ತಿರಸ್ಕರಿಸಲಾಗಿದೆ.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸಂಯೋಜಿತಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನೌಕರರುಇಲಾಖೆ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದು,ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಂತೆಒತ್ತಾಯಿಸಿದರು.

ADVERTISEMENT

ಇಲಾಖೆ ನಿರ್ದೇಶಕಿ ಇಂದುಮತಿ ಅವರು ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಸಚಿವ ಡಾ.ಕೆ. ಸುಧಾಕರ್ ಅವರು ಸ್ಥಳಕ್ಕೆ ಬಂದು, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಬೇಕು ಎಂದು ನೌಕರರು ಆಗ್ರಹಿಸಿದರು.

‘ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕುಟುಂಬದಿಂದ ದೂರ ಉಳಿದು, ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸಿದ್ದೇವೆ. ಕೆಲವರು ಕೋವಿಡ್ ಪೀಡಿತರಾಗಿ ಸಮಸ್ಯೆ ಎದುರಿಸಿದ್ದೇವೆ. ಈಗ ದಿಢೀರ್ ನಮ್ಮ ಸೇವೆ ಸ್ಥಗಿತಗೊಳಿಸಿರುವುದರಿಂದ ಕುಟುಂಬ ಬೀದಿಗೆ ಬರಲಿದೆ. ಆರೋಗ್ಯ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಉಳಿದಿದ್ದು, ಸರ್ಕಾರವು ನೇಮಕಾತಿಗೆ ಕ್ರಮವಹಿಸಬೇಕು’ ಎಂದು ಪ್ರತಿಭಟನಕಾರರುಒತ್ತಾಯಿಸಿದರು.

‘ಹಲವು ಜಿಲ್ಲೆಗಳಲ್ಲಿ ನೌಕರರ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಸರ್ಕಾರ ಘೋಷಣೆ ಮಾಡಿದ ವಿಶೇಷ ಪ್ರೋತ್ಸಾಹಧನವೂ ಬಿಡುಗಡೆಯಾಗಿಲ್ಲ. ಇದರಿಂದ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಕಿ ಹಣ ಹಾಗೂ ಪ್ರೋತ್ಸಾಹ ಧನವನ್ನು ತಕ್ಷಣವೇ ಸರ್ಕಾರ ಬಿಡುಗಡೆ ಮಾಡಬೇಕು. ಈ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಡೆಸಲಾಗುವುದು’ ಎಂದುಸಂಘದ ರಾಜ್ಯ ಘಟಕದ ಅಧ್ಯಕ್ಷ ಮಹೇಶ ನಾಡಗೌಡ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.