ADVERTISEMENT

ಹೃದಯ ವೈಫಲ್ಯ: ‘ಇಂಪೆಲ್ಲಾ ಹಾರ್ಟ್‌ಪಂಪ್‌’ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 21:18 IST
Last Updated 30 ಆಗಸ್ಟ್ 2022, 21:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ದೀರ್ಘಕಾಲದ ಹೃದಯ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮೂವರು ವೃದ್ಧರಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ‘ಇಂಪೆಲ್ಲಾ ಹಾರ್ಟ್ ಪಂಪ್’ ಸಾಧನದ ಸಹಾಯದಿಂದ ಆಂಜಿಯೋಪ್ಲ್ಯಾಸ್ಟಿ ನಡೆಸಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಹೃದಯ ತಜ್ಞ ಡಾ. ವಿವೇಕ್‌ ಜವಳಿ, ‘ಹೃದಯಾಘಾತಕ್ಕೆ ಒಳಗಾದವರು ಹಾಗೂ ಹೃದಯದ ನಾಳ ಬ್ಲಾಕ್‌ ಆದವರನ್ನು ಕೂಡಲೇ ಬದುಕಿಸಲು ‘ಇಂಪೆಲ್ಲಾ ಹಾರ್ಟ್‌ಪಂಪ್‌’ ಸಾಧನ ಸಹಾಯಕ. ಈ ಹಾರ್ಟ್‌ಪಂಪ್‌ ಅನ್ನು ನೇರವಾಗಿ ಹೃದಯನಾಳದೊಳಗೆ ಸೇರಿಸಿ, ಪಂಪ್‌ ಮಾಡುವುದರಿಂದ ಹೃದಯದ ನಾಳಗಳು ಬ್ಲಾಕ್‌ ಆಗಿದ್ದರೂ 5 ಲೀಟರ್ ರಕ್ತವನ್ನು ಪಂಪ್‌ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದರಿಂದ ಹೃದಯದ ನಾಲ್ಕು ರಕ್ತನಾಳಗಳು ಸರಾಗವಾಗಿ ರಕ್ತಸಂಚಾರಕ್ಕೆ ಅವಕಾಶ ಮಾಡಿಕೊಡುತ್ತವೆ. ಈ ಸಾಧನವನ್ನು 81 ಮತ್ತು 85 ವರ್ಷದ ವೃದ್ಧರು ಹಾಗೂ 71 ವರ್ಷದ ವೃದ್ಧೆಗೆ ಅಳವಡಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದರು.

‘ಮೂರು ವೃದ್ಧರು ಅನ್ಯ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಕೆಲವು ವರ್ಷಗಳ ಹಿಂದೆಯೇ ಹೃದಯ ಸಮಸ್ಯೆಗೆ ಒಳಗಾಗಿ, ಆಂಜಿಯೋಪ್ಲ್ಯಾಸ್ಟಿ ಮಾಡಿಸಿಕೊಂಡಿದ್ದರು. ಇದಾದ ಬಳಿಕವೂ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಅವರನ್ನು ಉಳಿಸಲು ಮತ್ತೊಮ್ಮೆ ಆಂಜಿಯೋಪ್ಲ್ಯಾಸ್ಟಿ ಮಾಡುವುದು ಅಸಾಧ್ಯದ ಕೆಲಸ. ಆದ್ದರಿಂದ ‘ಇಂಪೆಲ್ಲಾ ಹಾರ್ಟ್‌ಪಂಪ್‌’ ಸಾಧನವನ್ನು ಬಳಸಲಾಯಿತು’ ಎಂದು ವಿವರಿಸಿದರು. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಆರ್‌. ಕೇಶವ್‌, ‘ವ್ಯಕ್ತಿ ಬದುಕುಳಿಯುವ ಸಾಧ್ಯತೆಯಿಲ್ಲ ಎಂಬ ಸಂದರ್ಭದಲ್ಲಿಇಂಪೆಲ್ಲಾ ಹೃದಯ ಪಂಪ್‌ ಬಳಸಲಾಗುತ್ತದೆ.ಈ ಸಾಧನ ಬಳಕೆಯಿಂದ ವ್ಯಕ್ತಿಯ ಪ್ರಾಣ ಉಳಿಸಲು ಸಾಧ್ಯ. ಈ ಪಂಪ್‌ ಮೂಲಕ ಹೃದಯದ ರಕ್ತ ಸಂಚಾರವನ್ನು ಸರಾಗಗೊಳಿಸಬಹುದು. ಈ ಸಾಧನವನ್ನು ದೇಹದೊಳಗೆ ಹಾಕಲು ಕೇವಲ 15 ನಿಮಿಷ ಸಾಕು’ ಎಂದು ವಿವರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.