ಬೆಂಗಳೂರು: ಮೂತ್ರಪಿಂಡ ವೈಫಲ್ಯದ ಜತೆಗೆ ಹೃದಯ ಸಮಸ್ಯೆ ಹೊಂದಿದ್ದ 54 ವರ್ಷದ ವ್ಯಕ್ತಿಯೊಬ್ಬರಿಗೆ ಸಂಸದರೂ ಆಗಿರುವ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ನೇತೃತ್ವದ ವೈದ್ಯರ ತಂಡವು ಸಂಕೀರ್ಣ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಸಿ, ಸ್ಟೆಂಟ್ ಅಳವಡಿಸುವಲ್ಲಿ ಯಶಸ್ವಿಯಾಗಿದೆ.
ಜಯನಗರದ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಹೃದಯದ ರಕ್ತನಾಳದಲ್ಲಿ ರಕ್ತ ಪರಿಚಲನೆ ಶೇ 90 ರಷ್ಟು ಸ್ಥಗಿತವಾಗಿತ್ತು. ಪರೀಕ್ಷೆ ನಡೆಸಿದ ಬಳಿಕ ಹೊಸ ‘ಆರ್ಬಿಟಲ್ ಅಥೆರೆಕ್ಟಮಿ’ ಸಾಧನ ಬಳಸಿ ಚಿಕಿತ್ಸೆ ಒದಗಿಸಲಾಗಿದೆ ಎಂದು ಸಿ.ಎನ್. ಮಂಜುನಾಥ್ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
‘ಆರ್ಬಿಟಲ್ ಅಥೆರೆಕ್ಟಮಿ’ ಸಾಧನಕ್ಕೆ ₹3 ಲಕ್ಷವಿದ್ದು, ಸಂಸದರ ವಿನಂತಿ ಮೇರೆಗೆ ಕಂಪನಿಯೊಂದು ಈ ಸಾಧನವನ್ನು ಉಚಿತವಾಗಿ ಒದಗಿಸಿದೆ ಎಂದು ಆಸ್ಪತ್ರೆ ತಿಳಿಸಿದೆ.
ರಾಜಕೀಯಕ್ಕೆ ಪ್ರವೇಶಿಸಿದ ಬಳಿಕವೂ ಸಿ.ಎನ್. ಮಂಜುನಾಥ್ ಅವರು ವೈದ್ಯಕೀಯ ವೃತ್ತಿ ಮುಂದುವರಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.