ಬೆಂಗಳೂರು: ಹೃದಯ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ 14 ತಿಂಗಳ ಮಗುವಿಗೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೃದಯ ಕಸಿ ಮಾಡಿದ್ದಾರೆ.
ಈ ಪ್ರಕರಣದ ಬಗ್ಗೆ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಡಾ.ಶಶಿರಾಜ್, ‘ಹತ್ತು ತಿಂಗಳು ಇರುವಾಗಲೇ ಮಗುವಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ತೂಕ ನಷ್ಟ ಸೇರಿ ವಿವಿಧ ಸಮಸ್ಯೆಗಳು ಉಂಟಾಗಿ, ಮಗುವಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ವೈದ್ಯಕೀಯ ತಂಡದ ಪರಿಶೀಲನೆ ಬಳಿಕ ಹೃದಯದ ಕಸಿಯ ಏಕೈಕ ಆಯ್ಕೆ ನಮ್ಮ ಮುಂದಿತ್ತು. ಮಗುವಿಗೆ ಹೊಂದಾಣಿಕೆಯಾಗುವ ಹೃದಯವು 72 ಗಂಟೆಗಳ ಅವಧಿಯಲ್ಲಿ ದೊರೆಯಿತು. ಎರಡೂವರೆ ವರ್ಷದ ಮಗುವಿನ ಹೃದಯವನ್ನು ದಾನವಾಗಿ ಪಡೆಯಲಾಗಿತ್ತು. ಆ ಹೃದಯವನ್ನು ಕಸಿ ಮಾಡಲಾಯಿತು’ ಎಂದು ತಿಳಿಸಿದರು.
‘ಮಗುವಿಗೆ ಆ.18ರಂದು ಕಸಿ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಸುಮಾರು ಎರಡು ತಿಂಗಳು ಚಿಕಿತ್ಸೆ ಒದಗಿಸಲಾಗಿತ್ತು. ಮಗು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡು, ಆಸ್ಪತ್ರೆಯಿಂದ ಮನೆಗೆ ತೆರಳಿದೆ. ಈಗ ಮಗು ಆರೋಗ್ಯದಿಂದಿದ್ದು, ತೂಕವೂ ಏರಿಕೆಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.