ADVERTISEMENT

ಬೆಂಗಳೂರು ಭೂಮಾಫಿಯಾಗಳ ‘ಸ್ವರ್ಗ’!

ಮಠಗಳು, ಕನ್ನಡ ಸಂಘಟನೆಗಳು ಮಾಫಿಯಾ ವಿರುದ್ಧ ಧ್ವನಿ ಎತ್ತಬೇಕು: ಎ.ಟಿ.ರಾಮಸ್ವಾಮಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 21:01 IST
Last Updated 17 ಮಾರ್ಚ್ 2021, 21:01 IST
ಎ.ಟಿ.ರಾಮಸ್ವಾಮಿ
ಎ.ಟಿ.ರಾಮಸ್ವಾಮಿ   

ಬೆಂಗಳೂರು: ಬೆಂಗಳೂರು ಭೂಮಾಫಿಯಾಗಳ ‘ಸ್ವರ್ಗ’ವಾಗಿದೆ. ಈ ಮಾಫಿಯಾವನ್ನು ಬಗ್ಗು ಬಡಿದು ಸರ್ಕಾರಕ್ಕೆ ಸೇರಿದ ಅಮೂಲ್ಯ ಜಮೀನು ಉಳಿಸಿಕೊಳ್ಳುವ ಇಚ್ಛಾಶಕ್ತಿ ಸರ್ಕಾರಕ್ಕೆ ಇಲ್ಲ ಎಂದು ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ಭೂ ಮಾಫಿಯಾಗೆ ಸಿಕ್ಕಿ ನಲುಗುತ್ತಿದೆ. ಆದರೆ, ಸರ್ಕಾರಗಳಿಗೆ ಮಾಫಿಯಾ ಹಿಡಿತದಿಂದ ಪಾರು ಮಾಡುವ ಇಚ್ಛಾ ಶಕ್ತಿ ಇಲ್ಲವಾಗಿದೆ ಎಂದು ಹೇಳಿದರು.

ಭೂಮಾಫಿಯಾ ವಿರುದ್ಧ ಮಠ ಮಾನ್ಯಗಳು, ಕನ್ನಡ ಸಂಘಟನೆಗಳು ಧ್ವನಿ ಎತ್ತಬೇಕು. ನೆಲದ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ 4 ಸಾವಿರ ಎಕರೆ ಜಮೀನು ಕಬಳಿಕೆ ಆಗಿದೆ. ಬಿಡಿಎ ಅಧಿಕಾರಿಗಳ ಪಾತ್ರವಿಲ್ಲದೇ ಇಷ್ಟು ಪ್ರಮಾಣದ ಜಮೀನು ಕಬಳಿಕೆ ಸಾಧ್ಯವಿಲ್ಲ. ತಕ್ಷಣವೇ ವಶಕ್ಕೆ ತೆಗೆದುಕೊಳ್ಳಲು ಮಿಂಚಿನ ವೇಗದಲ್ಲಿ ಕಾರ್ಯಾಚರಣೆ ಮಾಡಬೇಕು ಎಂದು ರಾಮಸ್ವಾಮಿ ಆಗ್ರಹಿಸಿದರು.

ಸರ್ಕಾರಿ ಜಮೀನಿನಲ್ಲಿ ಸಾವಿರಾರು ಅಕ್ರಮ ಬಡಾವಣೆಗಳು ನಿರ್ಮಾಣವಾಗಿವೆ. ಇವೆಲ್ಲ ಅಧಿಕಾರಿಗಳಿಗೆ ಗೊತ್ತಿಲ್ಲದೆಯೇ ನಡೆಯುತ್ತಿಲ್ಲ. ಹಣ ಮಾಡಲು ಸ್ವರ್ಗ ಎಂಬ ಕಾರಣಕ್ಕೆ ಅಧಿಕಾರಿಗಳು ಬೆಂಗಳೂರಿಗೆ ಬರಲು ಪ್ರಭಾವಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದರು.

ಭೂಮಾಫಿಯಾ ವಿಧಾನಸೌಧದ ಸುತ್ತಲೇ ಗಿರಕಿ ಹೊಡೆಯುತ್ತಾ ಇರುತ್ತದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ನುಂಗಿದ ಒಬ್ಬರ ಮೇಲೂ ಈವರೆಗೆ ಕ್ರಮ ಆಗಿಲ್ಲ. ಇವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಬೇಕು ಎಂದು ರಾಮಸ್ವಾಮಿ ಆಗ್ರಹಿಸಿದರು.

ಬಿಬಿಎಂಪಿಯ 18 ಕಿ.ಮೀ ವ್ಯಾಪ್ತಿಯಲ್ಲಿ 5,000 ಎಕರೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಮಂಜೂರಾತಿ ಮಾಡಲಾಗಿದೆ. ಇದರ ಮೌಲ್ಯ ₹50 ಸಾವಿರ ಕೋಟಿ ಆಗುತ್ತದೆ. ಈ ಪ್ರಕರಣದಲ್ಲಿ ಮಾಜಿ ಶಾಸಕರೊಬ್ಬರು ಬೇರೊಬ್ಬರಿಗೆ ಭೂಮಿ ಮಂಜೂರಾತಿ ಮಾಡಿಸಿ ಬಳಿಕ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. 5,000 ಎಕರೆ ಹಂಚಿಕೆಯನ್ನು ರದ್ದು ಮಾಡಬೇಕು ಎಂದು ರಾಮಸ್ವಾಮಿ ಒತ್ತಾಯಿಸಿದರು.

ಇದಲ್ಲದೇ, ಬೆಂಗಳೂರು ಸುತ್ತಮುತ್ತ 145 ಪ್ರಕರಣಗಳಲ್ಲಿ 1,048 ಎಕರೆ ಸರ್ಕಾರಿ ಭೂಮಿ ಮತ್ತು ಗೋಮಾಳವನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರಾತಿ ಮಾಡಲಾಗಿದೆ. ಕಾನೂನು ಪ್ರಕಾರ ಇದನ್ನು ಖಾಸಗಿಯವರಿಗೆ ಕೊಡುವಂತಿಲ್ಲ. ಆದರೆ, ಉಪವಿಭಾಗಾಧಿಕಾರಿ ಒಂದೇ ಆದೇಶದಲ್ಲಿ ಖಾಸಗಿಯವರಿಗೆ ನೀಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಭೂ ಅಕ್ರಮದ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಂಡರೆ 2 ವರ್ಷಗಳ ಬಜೆಟ್‌ ಮೊತ್ತದ ಹಣ ಸರ್ಕಾರ ಸಿಗುತ್ತದೆ. ಆದರೆ, ಸರ್ಕಾರಿ ವಕೀಲರು ಸರ್ಕಾರದ ಪರವಾಗಿ ಕೆಲಸ ಮಾಡುತ್ತಿಲ್ಲ. ನ್ಯಾಯಾಧೀಶರ ಮುಂದೆ ಸರಿಯಾಗಿ ವಾದಿಸದೇ ಬಾಯಿ ಮುಚ್ಚಿಕೊಂಡು ನಿಲ್ಲುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಹಿನ್ನಡೆ ಆಗುತ್ತಿದೆ. ಕಾನೂನು ವಿಭಾಗವನ್ನು ಬಲಪಡಿಸಬೇಕು ಎಂದು ಹೇಳಿದರು.

ಮಧ್ಯಪ್ರವೇಶಿಸಿ ಮಾತನಾಡಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ’ಲೋಪ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ. ವಕೀಲರು ಸರಿ
ಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾ
ದರೆ ವಕೀಲರನ್ನು ಬದಲಿಸುವುದು ಕಂದಾಯ ಇಲಾಖೆಯ ಕಾರ್ಯದರ್ಶಿಯವರ ಕೆಲಸ ಅಲ್ಲವೇ. ಸಭೆಯಲ್ಲಿ ದೂರಿ
ದರೆ ಏನು ಪ್ರಯೋಜನ. ಕಂದಾಯ ಇಲಾಖೆ ಈ ಪ್ರಕರಣಗಳ ನಿರ್ವಹಣೆಗಾಗಿ ವಕೀಲರ ಪ್ಯಾನಲ್‌ ರಚಿಸುವುದು ಸೂಕ್ತ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.