ADVERTISEMENT

Bengaluru Rains | ರಾತ್ರಿ ವರ್ಷಧಾರೆ ಅಬ್ಬರ: ರಸ್ತೆಗಳು ಜಲಾವೃತ

ಮನೆಗಳಿಗೆ ನುಗ್ಗಿದ ನೀರು, ಬಸ್‌ಗಳು ಮುಳುಗಡೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 0:26 IST
Last Updated 22 ಅಕ್ಟೋಬರ್ 2024, 0:26 IST
ದೊಡ್ಡಬಿದರಕಲ್ಲು ರಸ್ತೆಯೊಂದರಲ್ಲಿ ಧರಗೆ ಉರುಳಿರುವ ಮರ
ದೊಡ್ಡಬಿದರಕಲ್ಲು ರಸ್ತೆಯೊಂದರಲ್ಲಿ ಧರಗೆ ಉರುಳಿರುವ ಮರ   

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರದಿಂದ ಬೆಳಿಗ್ಗೆವರೆಗೆ ಸುರಿದ ಮಳೆಯಿಂದ ದಿನವಿಡೀ ಸುಧಾರಿಸಿಕೊಳ್ಳುತ್ತಿದ್ದ ನಾಗರಿಕರಿಗೆ, ಸೋಮವಾರ ರಾತ್ರಿ ಮತ್ತೆ ಅಬ್ಬರಿಸಿದ ಮಳೆ ನಿದ್ದೆಗೆಡಿಸಿತು.

ಸೋಮವಾರ ಬೆಳಿಗ್ಗೆ 10ರಿಂದ ರಾತ್ರಿ 8 ರವರೆಗೆ ಆಗಾಗ ತುಂತುರು ಮಳೆಯಾಗಿತ್ತಿತ್ತು. ರಾತ್ರಿ 10ರ ನಂತರ ಬಿರುಸುಗೊಂಡ ಮಳೆ ಮತ್ತೆ ಅವಾಂತರ ಸೃಷ್ಟಿಸಿತು. ತಡರಾತ್ರಿಯವರೆಗೆ ಅಬ್ಬರ ಮುಂದುವರಿದಿತ್ತು.

ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡರೆ, ಹಲವು ಮನೆಗಳಿಗೆ ನೀರು ನುಗ್ಗಿತು. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರ ನಿಧಾನಗತಿಯಾಗಿ ದಟ್ಟಣೆ ಉಂಟಾಯಿತು. ದ್ವಿಚಕ್ರ ವಾಹನ ಸವಾರರು ಪರದಾಡಿದರು.

ADVERTISEMENT

ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಯಿತು. ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಖಾಸಗಿ ಬಸ್ ಗಳು ರಸ್ತೆಯ ಮಧ್ಯೆ ನಿಂತಿದ್ದರಿಂದ ದಟ್ಟಣೆ ಅಧಿಕವಾಗಿತ್ತು.

ಹೆಬ್ಬಾಳ ಜಂಕ್ಷನ್ ಸುತ್ತಮುತ್ತಲ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಂತಾಗಿತ್ತು.

ಯಲಹಂಕದಲ್ಲಿ ರಾತ್ರಿ 11.30 ರ ವೇಳೆಗೆ 15 ಸೆಂಟಿಮೀಟರ್ ಗೂ ಹೆಚ್ಚು ಮಳೆಯಾಯಿತು.
ಅಟ್ಟೂರಿನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ನೀರು ಹಾಕಲು ಹರಸಾಹಸ ಪಟ್ಟರು. ಹಲವರು ರಕ್ಷಣೆಗಾಗಿ ಮನೆಯಿಂದ ಹೊರಬಂದರು.

ರಾತ್ರಿ ವರ್ಷಧಾರೆ ಅಬ್ಬರ

ನಗರದ ವಿವಿಧ ಭಾಗಗಳಲ್ಲಿ ಸೋಮವಾರ ಬೆಳಿಗ್ಗೆ 9ರವರೆಗೆ ಸುರಿದ ಧಾರಾಕಾರ ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿತ್ತು.

ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ವಿಧಾನಸೌಧ, ಶಾಂತಿನಗರ, ಜಯನಗರ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ ಹಾಗೂ ಮಲ್ಲೇಶ್ವರಂನಲ್ಲಿ ಜೋರು ಮಳೆ ಸುರಿಯಿತು.

ಮೈಸೂರು ರಸ್ತೆ ಆರ್‌.ವಿ ಕಾಲೇಜಿನ ಸಮೀಪ ಹೆದ್ದಾರಿಯಲ್ಲಿ ನೀರು ನಿಂತಿತ್ತು. ಕೆಂಗೇರಿಯ ರೈಲ್ವೆ ನಿಲ್ದಾಣದಲ್ಲಿ ಮಳೆಯ ನೀರು ರೈಲ್ವೆ ಹಳಿಗಳು ಮುಳುಗಿದವು.

ಎಚ್‌ಎಸ್‌ಆರ್‌ ಲೇಔಟ್‌ನ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಇದೇ ಲೇಔಟ್‌ನ ಫ್ರೀಡಂ ಶಾಲೆಯ ಸುತ್ತ ನೀರು ನಿಂತು ಜಲದಿಗ್ಭಂದನವಾಯಿತು. ಶಾಲೆಯ ಹೊರಗೆ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬಸ್‌ಗಳು ನೀರಿನಲ್ಲಿ ಮುಳುಗಿದವು.

ಕೋರಮಂಗಲದಲ್ಲಿ ಮುಖ್ಯರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಕೋರಮಂಗಲದಲ್ಲಿರುವ ಕ್ರೀಡಾ ಗ್ರಾಮಕ್ಕೂ ನೀರು ನುಗ್ಗಿತ್ತು. ಸರ್ಜಾಪುರ-ದೊಮ್ಮಸಂದ್ರ ರಸ್ತೆ ಜಲಾವೃತಗೊಂಡಿತು. ದೊಮ್ಮಸಂದ್ರ ಸರ್ಕಲ್ ಬಳಿ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತು. ಇದರಿಂದ ಕಿಲೋ ಮೀಟರ್‌ಗಟ್ಟಲೇ ಸಂಚಾರ ದಟ್ಟಣೆ ಉಂಟಾಯಿತು.

ರಜೆ ಮೌಖಿಕ ಆದೇಶ: ಸೋಮವಾರ ಬೆಳಿಗ್ಗೆ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಗದೀಶ್ ಅವರು, ಬೆಳಿಗ್ಗೆ 7.30ರ ಸುಮಾರಿಗೆ ಶಾಲೆಗಳಿಗೆ ರಜೆ ಘೋಷಿಸಿ ಮೌಖಿಕ ಆದೇಶ ಹೊರಡಿಸಿದರು. ರಜೆ ಘೋಷಿಸಿರುವುದು ತಿಳಿಯದ ಕೆಲ ಪೋಷಕರು ಆಟೊ, ಬೈಕ್, ಕಾರುಗಳಲ್ಲಿ ಮಕ್ಕಳನ್ನು ಕರೆದುಕೊಂಡು ಶಾಲೆಯತ್ತ ಹೊರಟಿದ್ದರು. ರಜೆ ಘೋಷಣೆ ತಿಳಿದ ಮೇಲೆ ಮನೆಗೆ ವಾಪಸಾದರು. ಕೆಲವು ಖಾಸಗಿ ಶಾಲೆಗಳು ಅರ್ಧ ದಿನ ತರಗತಿ ನಡೆಸಿದವು.

ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಈಜೀಪುರದ ಶ್ರೀರಾಮ ರಸ್ತೆ ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು
ಹಲಸೂರಿನ ಮರ್ಫಿಟೌನ್‌ನಲ್ಲಿರುವ ಮಾರುಕಟ್ಟೆ ರಸ್ತೆಯಲ್ಲಿ ನಿಂತಿರುವ ಮಳೆ ನೀರಿನಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದು  ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್‌

30 ಮನೆ, 97 ರಸ್ತೆಗಳಲ್ಲಿ ನೀರು

ಬೆಂಗಳೂರು: ನಗರದಲ್ಲಿ ಭಾನುವಾರ ಹಾಗೂ ಸೋಮವಾರ ಸುರಿದ ಮಳೆಯಿಂದ 30 ಮನೆಗಳಿಗೆ ನೀರು ನುಗ್ಗಿದ್ದು, 97 ರಸ್ತೆಗಳಲ್ಲಿ ನೀರು ನಿಂತಿತ್ತು. ಈ ಪ್ರದೇಶಗಳಿಂದ ಒಂದು ಗಂಟೆಯಲ್ಲಿ ಮಳೆನೀರು ಹೊರಗೆ ಹರಿದು ಹೋಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ರಾಜರಾಜೇಶ್ವರಿನಗರ ಮತ್ತು ಯಶವಂತಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದೆ. ಯಲಚೇನಹಳ್ಳಿಯಲ್ಲಿ ಮೂರು, ಯಶವಂಪುರದಲ್ಲಿ 18, ನಾಗದೇವನಹಳ್ಳಿಯಲ್ಲಿ ಒಂಬತ್ತು ಮನೆಗಳಿಗೆ ನೀರು ನುಗ್ಗಿದೆ. ಏಳು ಮರ ಮತ್ತು 13 ಕೊಂಬೆಗಳು ಬಿದ್ದಿವೆ ಎಂದು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದರು.

‘ಮಳೆ ಸಂದರ್ಭದಲ್ಲೂ ಬೃಹತ್‌ ನೀರುಗಾಲುವೆಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಆದ್ದರಿಂದ ನೀರು ಸುಗಮವಾಗಿ ಹರಿಯುತ್ತಿದೆ. ಬಿಎಂಆರ್‌ಸಿಎಲ್‌ ವತಿಯಿಂದ ಕೇಂದ್ರ ರೇಷ್ಮೆ ಮಂಡಳಿ ಬಳಿ ಸೋಮವಾರದಿಂದ ಕೆಲಸ ಆರಂಭಿಸಿದ್ಧಾರೆ. ಪರ್ಯಾಯ ಕಾಲುವೆಯನ್ನು ಮಳೆ ನಿಂತ ಮೇಲೆ ಮಾಡುತ್ತೇವೆ ಎಂದಿದ್ದರು. ಆದರೆ, ಮಳೆಯಿಂದ ನೀರು ಹರಿಯುತ್ತಿಲ್ಲವಾದ್ದರಿಂದ ತಕ್ಷಣವೇ ಕೆಲಸ ಆರಂಭಿಸಿ ಎಂದು ಹೇಳಿದ್ದೇವೆ’ ಎಂದು ತಿಳಿಸಿದರು.

ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ಯಾವುದೇ ಮನೆಗಳಿಗೆ ನೀರು ನುಗ್ಗಿಲ್ಲ ಎಂದು ನಮ್ಮ ವಲಯ ಆಯುಕ್ತರು ತಿಳಿಸಿದ್ದಾರೆ. ನೀರು ಮನೆಯ ಹೊರಗೆ ನಿಂತಿತ್ತು. ಒಂದು ಗಂಟೆ ಯಲ್ಲಿ ನೀರು ಹೊರಗೆ ಹರಿದಿದೆ ಎಂದರು.

‘ವಿಶ್ವಬ್ಯಾಂಕ್‌ನ ₹1700 ಕೋಟಿ ಹಣ ದಿಂದ ರಾಜಕಾಲುವೆ ಮಾರ್ಗ ಸರಿಪಡಿಸುವು ದಷ್ಟೇ ಅಲ್ಲ, ರಾಜಕಾಲುವೆ ನಿರ್ಮಾಣ, ತೂಬು ನಿರ್ಮಾಣ ಸೇರಿದ ಕಾಮಗಾರಿ ನಡೆಸ ಲಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ₹250 ಕೋಟಿ ಅನುದಾನ ಅನು ಮೋದನೆಯಾಗಿದೆ. ಸಚಿವ ಸಂಪುಟದ ಒಪ್ಪಿಗೆ ನಂತರ ಅದರ ಬಳಕೆ ಮಾಡಲಾಗುತ್ತದೆ. ಇದರ ಜೊತೆಗೆ ಬಿಬಿಎಂಪಿ ಅನುದಾನದಿಂದ ರಾಜಕಾಲುವೆ ಅಭಿವೃದ್ಧಿ ಮಾಡಲಾಗುತ್ತದೆ’ ಎಂದು ಹೇಳಿದರು.

ಹಲಸೂರಿನ ಮರ್ಫಿಟೌನ್‌ನ ಮಾರ್ಕೆಟ್‌ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದ ಮಳೆ ನೀರನ್ನು ಮಹಿಳೆ ಮಕ್ಕಳು ಹೊರ ಹಾಕುತ್ತಿರುವ ದೃಶ್ಯ ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್
ಹಲಸೂರಿನ ಮರ್ಫಿಟೌನ್‌ನ ಮಾರ್ಕೆಟ್‌ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದ ಮಳೆ ನೀರನ್ನು ಮಹಿಳೆ ಮಕ್ಕಳು ಹೊರ ಹಾಕುತ್ತಿರುವ ದೃಶ್ಯ ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್

100 ಅಡಿ ಕಾಂಪೌಂಡ್‌ ಕುಸಿತ

ನ್ಯಾಯಾಂಗ ಬಡಾವಣೆಯ ಜಿಕೆವಿಕೆಯ ಹಳೆಯ ಸುಮಾರು 100 ಅಡಿ ಕಾಂಪೌಂಡ್ ಕುಸಿದು ರಸ್ತೆ ಮೇಲೆ ಬಿದ್ದಿತ್ತು. ಅದನ್ನು ಜೆಸಿಬಿ ಮೂಲಕ ರಸ್ತೆ ಬದಿಗೆ ತಳ್ಳಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಯಲಹಂಕ ವಲಯ ಆಯುಕ್ತ ಕರೀಗೌಡ ತಿಳಿಸಿದ್ದಾರೆ.

ಸೋಮವಾರ ಅವರು ನಿಯಂತ್ರಣ ಕೊಠಡಿಯಲ್ಲಿದ್ದು, ಮಳೆ ಹಾಗೂ ಮಳೆ ನೀರಿನ ಸಮಸ್ಯೆಗಳ ಬಗ್ಗೆ ಮೇಲುಸ್ತುವಾರಿ ವಹಿಸಿ, ಪರಿಹಾರ ನೀಡಿದರು.

ಕೊಡಿಗೆಹಳ್ಳಿಯ ಚಿತ್ರಕೂಟ ರೆಸಿಡೆನ್ಸಿಯ ಗೋಡೆ ಬಿದ್ದಿರುವ ಪರಿಣಾಮ ಪಕ್ಕದಲ್ಲಿರುವ ನೀರುಗಾಲುವೆಯಿಂದ ಅಪಾರ್ಟ್‌ಮೆಂಟ್‌ನ ನೆಲ ಮಹಡಿ ಹಾಗೂ ಕೈಸರ್ ರೆಸಿಡೆನ್ಸಿ ಬೇಸ್‌ಮೆಂಟ್‌ಗೆ ನೀರು ನುಗ್ಗಿತ್ತು, ಅದನ್ನು ಪಂಪ್‌ ಮೂಲಕ ಹೊರಹರಿಸಲಾಗಿದೆ. 

ಕೊಡಿಗೆಹಳ್ಳಿ ಕೆಳ ಸೇತುವೆ, ಯಲಹಂಕ‌ ಕೆಳ ಸೇತುವೆ, ಸಹಕಾರ ನಗರದ ಎನ್.ಟಿ.ಐ ಕೆಳಸೇತುವೆ ನಿಂತಿರುವ ನೀರನ್ನು ತೆರವುಗೊಳಿಸಲಾಯಿತು.

ಬಸವ ಸಮಿತಿಯ ಬಳಿ ಒಂಬತ್ತು ಮನೆ, ವೆಂಕಟಶಾಮಪ್ಪ‌ ಲೇಔಟ್‌ನಲ್ಲಿ 10 ಮನೆ, ಎಂ.ಎಸ್ ಪಾಳ್ಯದಲ್ಲಿ ಎಂಟು ಮನೆ ಹಾಗೂ ಟೆಲಿಕಾಂ ಲೇಔಟ್‌ನಲ್ಲಿ ಒಂದು ಮನೆಗೆ ನೀರು ನುಗ್ಗಿದ್ದು, ನೀರು ತೆರವುಗೊಳಿಸುವ ಕೆಲಸ‌ ಮಾಡುತ್ತಿದ್ದಾರೆ‌. ಕಳೆದ ವಾರದ ಅತಿಹೆಚ್ಚು ನೀರು ನಿಂತಿದ್ದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ಗೆ ನೀರು ಹರಿದಿಲ್ಲ ಎಂದು ಕರೀಗೌಡ ತಿಳಿಸಿದ್ದಾರೆ.

ಹಲಸೂರಿನ ಮರ್ಫಿಟೌನ್‌ ಮಾರುಕಟ್ಟೆ ರಸ್ತೆ ಜಲಾವೃತಗೊಂಡಿದ್ದು ಮಳೆ ನೀರಿನಲ್ಲೇ ವ್ಯಕ್ತಿಯೊಬ್ಬರು ವಾಹನ ಚಲಾಯಿಸಿದರು.  ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್
ಭಾರಿ ಮಳೆಯಿಂದ ‌ಮೆಜೆಸ್ಟಿಕ್ ಬಸ್ ನಿಲ್ದಾಣದ ಅಂಗಳದಲ್ಲಿ ಬೃಹತ್ ಹೊಂಡವೊಂದು ನಿರ್ಮಾಣವಾಗಿರುವುದು ಕಂಡುಬಂತು. ‌ ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್

ಕೊಡಿಗೇಹಳ್ಳಿಯಲ್ಲಿ ವಾಹನ ಸವಾರರ ಪರದಾಟ

ಯಲಹಂಕ: ಸೋಮವಾರ ಸಂಜೆಯಿಂದ ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಕೊಡಿಗೇಹಳ್ಳಿ ರೈಲ್ವೆ ಕೆಳಸೇತುವೆಯಲ್ಲಿ ನೀರು ತುಂಬಿಕೊಂಡು ಸಂಚಾರ ಸ್ಥಗಿತಗೊಂಡಿತು. ಇದರಿಂದಾಗಿ ವಾಹನಸವಾರರು ತೀವ್ರ ತೊಂದರೆ ಅನುಭವಿಸಬೇಕಾಯಿತು.

ಈ ರಸ್ತೆಯು ಬಳ್ಳಾರಿ ರಸ್ತೆ ಮತ್ತು ಭದ್ರಪ್ಪ ಬಡಾವಣೆಯ ಮಾರ್ಗವಾಗಿ ಕೊಡಿಗೇಹಳ್ಳಿ ಕೆಳಸೇತುವೆ ಮೂಲಕ ತಿಂಡ್ಲು, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಚಿಕ್ಕಬೆಟ್ಟಹಳ್ಳಿ,ರಾಮ ಚಂದ್ರಪುರ, ಎಂ.ಎಸ್‌.ಪಾಳ್ಯ ಹಾಗೂ ಹೆಸರಘಟ್ಟದ ಮೂಲಕ ನೆಲಮಂಗಲದವರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಸಂಜೆ 7ಗಂಟೆಯಿಂದ ಕೆಳಸೇತುವೆಯಲ್ಲಿ ಸುಮಾರು 5 ಅಡಿಗಳಷ್ಟು ನೀರು ಸಂಗ್ರಹವಾದ ಪರಿಣಾಮ, ಈ ಭಾಗ ದಲ್ಲಿ ಸಂಚರಿಸುತ್ತಿದ್ದ ವಾಹನಸವಾರರು ತಮ್ಮ ಬಡಾವಣೆಗಳಿಗೆ ತೆರಳಲು ಪರದಾಡಿದರು.

ನೀರಿನಲ್ಲಿ ಸಿಲುಕಿಕೊಂಡಿದ್ದ ಹಲವು ವಾಹನಗಳನ್ನು ನೀರಿನಿಂದ ಹೊರತೆಗೆಯಲು ಹರಸಾಹಸ ಪಡಬೇಕಾಯಿತು.

ಮಾಲ್‌ ಆಫ್‌ ಏಷ್ಯಾ ಸಮೀಪದ ಎನ್‌.ಟಿ.ಐ ಲೇಔಟ್‌ ಅಂಡರ್‌ಪಾಸ್‌ ನಲ್ಲಿಯೂ ನೀರು ತುಂಬಿಕೊಂಡ ಪರಿಣಾಮ, ಈ ರಸ್ತೆಯಲ್ಲಿಯೂ ಸಂಚಾರಕ್ಕೆ ತೊಂದರೆಯಾಯಿತು. ಅಲ್ಲದೆ ಕೊಡಿಗೇಹಳ್ಳಿ ಕೆಳಸೇತುವೆ ಮೂಲಕ ತೆರಳುತ್ತಿದ್ದ ವಾಹನಸವಾರರಿಗೆ ಪರ್ಯಾಯ ಮಾರ್ಗವಾಗಿದ್ದ ಈ ರಸ್ತೆಯೂ ಬಂದ್‌ ಆದ ಪರಿಣಾಮ, ವಾಹನಸವಾರರು ಬೇರೆ ಮಾರ್ಗವಿಲ್ಲದೆ ಸುರಿಯುತ್ತಿರುವ ಮಳೆ ಯಲ್ಲಿ ತಮ್ಮ ವಾಹನಗಳನ್ನು ಯಾವಕಡೆ ಚಲಾಯಿಸಿಕೊಂಡು ಹೋಗಬೇಕೆಂದು ದಿಕ್ಕುತೋಚದೆ ಕಂಗಾಲಾದರು.

ಎನ್‌.ಟಿ.ಐ ಲೇಔಟ್‌ ಬಳಿ ರಾಜಕಾಲುವೆಯನ್ನು ಬಂದ್‌ ಮಾಡಿರುವ ಪರಿಣಾಮ, ನೀರು ಹರಿಯಲು ಆಸ್ಪದವಿಲ್ಲದೆ ಚರಂಡಿನೀರು ಮಳೆನೀರಿನ ಜೊತೆಗೆ ಮಿಶ್ರಣವಾಗಿ ರಸ್ತೆಯ ಮೇಲೆ ಹರಿಯು ವುದರ ಜೊತೆಗೆ ಕೊಡಿಗೇಹಳ್ಳಿ ರೈಲ್ವೆ ಕೆಳ ಸೇತುವೆಯಲ್ಲಿ ನೀರು ತುಂಬಿಕೊಳ್ಳಲು ಕಾರಣವಾಗಿದೆ ಎಂದು ಕೊಡಿಗೇಹಳ್ಳಿ ನಿವಾಸಿ ನಾರಾಯಣಸ್ವಾಮಿ ದೂರಿದರು.

ಭಾರಿ ಮಳೆ ಸುರಿದ ನಂತರ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿರುವ ಕಾಲುವೆಯಲ್ಲಿ ತೇಲಿಬಂದ ತ್ಯಾಜ್ಯವನ್ನು ತೆಗೆದು ಮೇಲ್ಸೇತುವೆ ಪಕ್ಕದಲ್ಲಿ ಸುರಿದಿರುವುದು ಕಂಡು ಬಂತು ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.  
ಬೆಂಗಳೂರಿನಲ್ಲಿ ರಾತ್ರಿಯೆಲ್ಲಾ ಸುರಿದ ಮಳೆಗೆ ಲಾಲ್ ಬಾಗ್ ರಸ್ತೆಯು ಜಲಾವೃತವಾಗಿದ್ದರಿಂದ ಯುವಕರು ಮೀನು ಹಿಡಿದರು.
ನಗರದಲ್ಲಿ ಸೋಮವಾರ ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ಜೆಜೆಆರ್ ನಗರದ ಐಪಿಡಿ ಸಾಲಪ್ಪ ಬಡಾವಣೆಯ ವಿಎಸ್ ಗಾರ್ಡನ್‌ನ ಮನೆಗಳಿಗೆ ನೀರು ನುಗ್ಗಿರುವುದರಿಂದ ಕುಟುಂಬಗಳು ಪರದಾಡುವಂತಾಯಿತು. ಪ್ರಜಾವಾಣಿ ಚಿತ್ರ: ರಂಜು ಪಿ

ಕ್ರೀಡಾಂಗಣದ ಆವರಣಕ್ಕೆ ನುಗ್ಗಿದ ಮಳೆ ನೀರು: 2 ಪಂದ್ಯಗಳು ಮುಂದಕ್ಕೆ

ಬೆಂಗಳೂರು: ಏಷ್ಯನ್ ನೆಟ್‌ಬಾಲ್ ಮಹಿಳಾ ಚಾಂಪಿಯನ್‌ಷಿಪ್ ನಡೆಯುತ್ತಿರುವ ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದ ಆವರಣಕ್ಕೆ ಸೋಮವಾರ ಬೆಳಿಗ್ಗೆ ಮಳೆ ನೀರು ನುಗ್ಗಿದ ಕಾರಣ ಎರಡು ಪಂದ್ಯಗಳನ್ನು ಮೂಂದೂಡಲಾಗಿದೆ.

‘ಬೆಳಿಗ್ಗೆ 9 ಗಂಟೆಗೆ ಪಂದ್ಯಗಳು ಆರಂಭವಾಗಬೇಕಿತ್ತು. ಆದರೆ, ಕ್ರೀಡಾಂಗಣದ ಆವರಣ ಜಲಾವೃತ ವಾಗಿದ್ದರಿಂದ ಚೀನಾ ತೈಪೆ– ಇರಾಕ್‌ ಮತ್ತು ಫಿಲಿಪೀನ್ಸ್‌– ಜಪಾನ್‌ ನಡುವಿನ ಪಂದ್ಯವನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಮಧ್ಯಾಹ್ನ 1ಗಂಟೆಗೆ ಇತರ ಪಂದ್ಯಗಳು ಆರಂಭವಾಗಿ, ನಿಗದಿಯಂತೆ ನಡೆದವು’ ಎಂದು ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಿರೀಶ್‌ ಸಿ. ತಿಳಿಸಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್ ಸೆಕ್ಟರ್–4ನ ಫ್ರೀಡಂ ಶಾಲೆಯ ಬಳಿ ರಸ್ತೆಯ ಹೊಂಡದಂತಾಗಿದ್ದು ವಾಹನ ಸವಾರರು ಪಾದಚಾರಿಗಳು ಪರದಾಡಿದರು ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ
ಬೆಂಗಳೂರಿನಲ್ಲಿ ಸೋಮವಾರ ಜಲಾವೃತಗೊಂಡ ಸಿಲ್ಕ್ ಬೋರ್ಡ್ ಜಂಕ್ಷನ್ ಬಸ್ ತಂಗುದಾಣ ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಮರಗಳು ಧರೆಗೆ

ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಪೀಣ್ಯಾ ದಾಸರಹಳ್ಳಿ ವ್ಯಾಪ್ತಿಯಲ್ಲಿರುವ ಗೃಹಲಕ್ಷ್ಮಿ ಬಡಾವಣೆ ಹೆಗ್ಗನಹಳ್ಳಿ ಎನ್‌ಟಿಟಿಎಫ್ ಹತ್ತಿರ ಪೀಣ್ಯ 2ನೇ ಹಂತ ದೊಡ್ಡಬಿದರಕಲ್ಲು ಕಮ್ಮಗೊಂಡನಹಳ್ಳಿ ಫಾರೆಸ್ಟ್ ರಸ್ತೆಯಲ್ಲಿ  ಮರಗಳು ಧರಗೆ ಉರುಳಿದವು. ಅವುಗಳನ್ನು ಅರಣ್ಯ ಇಲಾಖೆಯವರು ತೆರೆವುಗೊಳಿಸುವ ಕಾರ್ಯ ನಡೆಸಿದರು.

ಕೋರಮಂಗಲದಲ್ಲಿ 7 ಸೆಂ.ಮೀ ಮಳೆ

ಸೋಮವಾರ ಬೆಳಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ಕೋರಮಂಗಲ ಮತ್ತು ವನ್ನಾರ್‌ಪೇಟೆಯಲ್ಲಿ ತಲಾ 7 ಸೆಂ.ಮೀನಷ್ಟು ಮಳೆಯಾಗಿದೆ. ಹಂಪಿನಗರ ಗಾಳಿ ಆಂಜನೇಯ ದೇವಸ್ಥಾನ ಮತ್ತು ನಾಗಪುರದಲ್ಲಿ ತಲಾ 6.5 ಸೆಂ.ಮೀಗೂ ಅಧಿಕ ಮಳೆಯಾಗಿದೆ. ಬಾಗಲಗುಂಟೆ ಆರ್‌ಆರ್‌ ನಗರ ನಂದಿನಿ ಲೇಔಟ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ತಲಾ 5 ಸೆಂ.ಮೀಗೂ ಹೆಚ್ಚು ಮಳೆಯಾಗಿದೆ.   ಮಳೆ ಎಷ್ಟು? ಸೆಂ.ಮೀಗಳಲ್ಲಿ ಸೋಮವಾರ ಬೆಳಿಗ್ಗೆ 8.30ರ ನಂತರ ರಾತ್ರಿ 9.30ವರೆಗೆ ಚೌಡೇಶ್ವರಿ;5.7 ಜಕ್ಕೂರು;5.2 ವಿದ್ಯಾರಣ್ಯಪುರ;4.6 ಪೀಣ್ಯ ಕೈಗಾರಿಕೆ ಪ್ರದೇಶ;3.6 ಕೊಡಿಗೆಹಳ್ಳಿ;3.5 ಬಾಗಲಗುಂಟೆ;3.5 ಶೆಟ್ಟಿಹಳ್ಳಿ;3.2 ಹೊರಮಾವು;2.5 ಚೊಕ್ಕಸಂದ್ರ;2.2 ದೊಡ್ಡಬಿದರಕಲ್ಲು;1.2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.