ADVERTISEMENT

Bengaluru Rains | ಭಾರಿ ಮಳೆ: ಕಾಲುವೆಯಂತಾದ ರಸ್ತೆಗಳು

ವಾಹನ ಸಂಚಾರಕ್ಕೆ ತೊಡಕು * ದ್ವೀಪಗಳಂತಾದ ಬಡಾವಣೆಗಳು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 0:30 IST
Last Updated 21 ಅಕ್ಟೋಬರ್ 2024, 0:30 IST
<div class="paragraphs"><p>ಭಾನುವಾರ ಸುರಿದ ಭಾರಿ ಮಳೆಗೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಹೊಸದಾಗಿ ಹಾಕಲಾಗಿದ್ದ ಡಾಂಬರು ಕೊಚ್ಚಿ ಹೋಗಿದೆ </p></div>

ಭಾನುವಾರ ಸುರಿದ ಭಾರಿ ಮಳೆಗೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಹೊಸದಾಗಿ ಹಾಕಲಾಗಿದ್ದ ಡಾಂಬರು ಕೊಚ್ಚಿ ಹೋಗಿದೆ

   

ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ.

ಬೆಂಗಳೂರು: ಶನಿವಾರ ರಾತ್ರಿ ಮತ್ತು ಭಾನುವಾರ ನಗರದ ವಿವಿಧೆಡೆ ಮಳೆಯಾಗಿದೆ. ಹಲವು ಕಡೆಗಳಲ್ಲಿ ರಸ್ತೆಗಳಲ್ಲೇ ನೀರು ಹರಿಯಿತು. ರಾಜಕಾಲುವೆ ಮತ್ತು ಚರಂಡಿಗಳು ಮುಚ್ಚಿಕೊಂಡಿದ್ದರಿಂದ ವಿವಿಧೆಡೆ 25ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ADVERTISEMENT

ಜ್ಞಾನಭಾರತಿ ಮೆಟ್ರೊ ನಿಲ್ದಾಣದಿಂದ ಪಟ್ಟಣಗೆರೆ ಮೆಟ್ರೊ ನಿಲ್ದಾಣದವರೆಗೆ ರಸ್ತೆಯೇ ಕಾಲುವೆಯಂತಾಗಿದ್ದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಇದೇ ರಸ್ತೆಯಲ್ಲಿ ಇತ್ತೀಚೆಗೆ ಹೊಸದಾಗಿ ಹಾಕಲಾಗಿದ್ದ ಡಾಂಬರು ಕೊಚ್ಚಿ ಹೋಗಿದೆ.

ಖೋಡೆ ಅಂಡರ್‌ಪಾಸ್‌ನಿಂದ ಲುಲು ಮಾಲ್‌ವರೆಗೆ ಎರಡೂ ಕಡೆ ನೀರು ನಿಂತಿದ್ದರಿಂದ ವಾಹಗಳ ಚಾಲನೆಗೆ ತೊಂದರೆಯಾಯಿತು. ಇದೇ ರೀತಿಯಲ್ಲಿ ಆರ್‌.ವಿ. ಕಾಲೇಜು ಬಳಿಯ ಜೈರಾಮ್ ಜಂಕ್ಷನ್‌ನಲ್ಲಿ ಎರಡೂ ಕಡೆಗಳ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಯಿತು. ವರ್ತೂರು- ಗುಂಜೂರು ರಸ್ತೆಯಲ್ಲಿ ರಸ್ತೆಯೇ ಚರಂಡಿಯಂತಾಯಿತು. ನಾಗವಾರ ಜಂಕ್ಷನ್‌ನಲ್ಲಿ ನೀರು ನಿಂತಿದ್ದರಿಂದ ವೀರಣ್ಣಪಾಳ್ಯ ಕಡೆಗೆ ಸಾಗುವ ವಾಹನಗಳಿಗೆ ಅಡಚಣೆ ಉಂಟಾಯಿತು.

ಶಾಂತಿನಗರ, ಜಯನಗರ, ತ್ಯಾಗರಾಜನಗರ, ರಾಜರಾಜೇಶ್ವರಿ ನಗರ, ಶ್ರೀನಗರ, ಕೆ.ಆರ್. ಮಾರ್ಕೆಟ್‌, ಟೌನ್‌ಹಾಲ್‌, ಕಾರ್ಪೊರೇಷನ್‌ ಸರ್ಕಲ್‌, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿ ನಗರ, ಮಲ್ಲೇಶ್ವರ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಹೆಬ್ಬಾಳ, ಯಲಹಂಕ ಸೇರಿದಂತೆ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಹೊರಮಾವು ಬಳಿಯ ಸಾಯಿ ಲೇ ಔಟ್, ಯಲಹಂಕದ ರಮಣಶ್ರೀ ಕ್ಯಾಲಿಫೋರ್ನಿಯ ಬಡಾವಣೆಗಳಿಗೆ ಮತ್ತೆ ನೀರು ನುಗ್ಗಿರುವುದರಿಂದ ಬಡಾವಣೆಗಳು ದ್ವೀಪದಂತಾಗಿವೆ.

ಮೈಸೂರು ರಸ್ತೆಯಲ್ಲಿ ಇರುವ ಕಾರು ಶೋರೂಂಗಳಿಗೆ ನೀರು ನುಗ್ಗಿದೆ. ರಾಜರಾಜೇಶ್ವರಿ ನಗರದ ಬೆಮೆಲ್ ಲೇ ಔಟ್, ಪಟ್ಟಣಗೆರೆ, ಗ್ಲೋಬಲ್ ಟೆಕ್ ಪಾರ್ಕ್ ಸುತ್ತಮುತ್ತ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸಲಾರದಷ್ಟು ನೀರು ನಿಂತಿತ್ತು. ಪರಪ್ಪನ ಅಗ್ರಹಾರ– ಸರ್ಜಾಪುರ ರಸ್ತೆಯಲ್ಲಿಯೇ ನೀರು ಹರಿಯಿತು.

ಅಧಿಕ ಮಳೆಯಾದ ಪ್ರದೇಶ: ಬಾಗಲಗುಂಟೆ 5.4 ಸೆಂ.ಮೀ., ಶೆಟ್ಟಿಹಳ್ಳಿ 4.2 ಸೆಂ.ಮೀ., ನಾಗಪುರ 3.8 ಸೆಂ.ಮೀ., ನಂದಿನಿ ಬಡಾವಣೆ 3.3 ಸೆಂ.ಮೀ., ಹೇರೋಹಳ್ಳಿ 2.9 ಸೆಂ.ಮೀ., ದೊಡ್ಡಬಿದರಕಲ್ಲು 2.5 ಸೆಂ.ಮೀ. ಕೊಟ್ಟಿಗೆ ಪಾಳ್ಯ 2.4 ಸೆಂ.ಮೀ., ಬಸವೇಶ್ವರನಗರ 2.4 ಸೆಂ.ಮೀ., ದೊರೆಸಾನಿ ಪಾಳ್ಯ 2,1 ಸೆಂ.ಮೀ., ಕೆಂಗೇರಿ 2.1 ಸೆಂ.ಮೀ., ಪೀಣ್ಯ ಇಂಡಸ್ಟ್ರೀ 2 ಸೆಂ.ಮೀ.,  ರಾಜಾಜಿನಗರ 1.9 ಸೆಂ.ಮೀ., ಹಂಪಿನಗರ 1.5 ಸೆಂ.ಮೀ., ಚೊಕ್ಕಸಂದ್ರ 1.3 ಸೆಂ.ಮೀ., ರಾಜರಾಜೇಶ್ವರಿ ನಗರ 1.2 ಸೆಂ.ಮೀ., ಬೊಮ್ಮನಹಳ್ಳಿ 1.1 ಸೆಂ.ಮೀ., ಅರಕೆರೆ 1.1 ಸೆಂ.ಮೀ., ಅಂಜನಪುರ 1 ಸೆಂ. ಮೀ., ಮಾರುತಿ ಮಂದಿರ 1 ಸೆಂ.ಮೀ. ಮಳೆಯಾಗಿದೆ.

ಜ್ಞಾನಭಾರತಿ ಮತ್ತು ಪಟ್ಟಣಗೆರೆ ಮೆಟ್ರೊ ನಿಲ್ದಾಣಗಳ ನಡುವೆ ಜಲಾವೃತವಾದ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಕೆಟ್ಟು ನಿಂತಿದ್ದರಿಂದ ವಾಹನ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿತು. ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ.
ಲುಲು ಮಾಲ್‌ ಬಳಿ ಖೋಡೆ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಯಿತು

ಬಿರುಸಿನ ಮಳೆ; ಮನೆಗಳಿಗೆ ನುಗ್ಗಿದ ನೀರು

ರಾಜರಾಜೇಶ್ವರಿನಗರ: ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಸುರಿದ ಭಾರಿ ಮಳೆಯಿಂದಾಗಿ ನಾಗದೇವನಹಳ್ಳಿ ಬಳಿಯ ರಾಮನಾಥನಗರ ಬಡಾವಣೆಯ ಸುಮಾರು 25 ಮನೆಗಳಿಗೆ ಮಳೆ ನೀರು ಹಾಗೂ ಚರಂಡಿ ನೀರು ನುಗ್ಗಿ, ನಿವಾಸಿಗಳು ಪರದಾಡುವಂತಾಯಿತು !

ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಜನರು ಹರಸಾಹಸಪಟ್ಟರು. ನೆಲಮಹಡಿಯಲ್ಲಿದ್ದ ಕೆಲವು ವಾಹನಗಳು ನೀರಿನಲ್ಲಿ ಮುಳುಗಿದವು. ನೀರು ತುಂಬಿಕೊಂಡಿದ್ದರಿಂದ ದಿಗಿಲುಬಿದ್ದವರು, ಮನೆಯ ಮೊದಲ ಮಹಡಿಯಲ್ಲಿ ಆಶ್ರಯಪಡೆದರು.

ಉಲ್ಲಾಳು ವಾರ್ಡ್‍ನ ನಾಗದೇವನಹಳ್ಳಿಯ ಜ್ಞಾನ ಬೋಧಿನಿ ಮುಖ್ಯರಸ್ತೆಯ ಮೇಲ್ಭಾಗದಲ್ಲಿರುವ ಆರ್.ಆರ್.ಬಡಾವಣೆ, ಮರಿಯಪ್ಪನಪಾಳ್ಯದಿಂದ ಮಳೆ ನೀರು ಮತ್ತು ಒಳ ಚರಂಡಿ ನೀರು ರಾಮನಾಥನಗರ ಬಡಾವಣೆ ಮೂಲಕ ದುಬಾಸಿಪಾಳ್ಯ ಕೆರೆಗೆ ಸೇರುತ್ತದೆ. ಕೆರೆ ಸಮೀಪದಲ್ಲೇ ಬಡಾವಣೆಯಿದೆ. ನೀರು ಹರಿಯುವ ಮೋರಿ ಕಿರಿದಾಗಿದ್ದು ಹಾಗೂ ಅದರಲ್ಲಿ ಹೆಚ್ಚು ಹೂಳು ತುಂಬಿದ್ದರಿಂದ, ಮಳೆ ನೀರು ಸರಾಗವಾಗಿ ಹರಿಯದೇ, ಸುತ್ತಮುತ್ತಲಿನ ಬಡಾವಣೆಗಳಿಗೆ ನುಗ್ಗಿದೆ’ ಎಂದು ನಾಗರಿಕರು ದೂರಿದರು.

ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಹಲವು ಮನೆಗಳಿಗೆ ನೀರು ನುಗ್ಗಿದರಿಂದ ನರಕಯಾತನೆ ಅನುಭವಿಸಿದ್ದೇವೆ ಎಂದು ಸ್ಥಳೀಯ ನಿವಾಸಿ ಜಗದೀಶ್ ಬೇಸರ ವ್ಯಕ್ತಪಡಿಸಿದರು. ಪಾರ್ಕಿಂಗ್ ಬದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ದ್ವಿಚಕ್ರವಾಹನ, ಕಾರು ನೀರಿನಲ್ಲಿ ಮುಳುಗಿವೆ. ಮಳೆ ನೀರಿನ ಜೊತೆಗೆ ಹಾವು ನುಗ್ಗಿತ್ತು. ಉರುಗ ತಜ್ಞರನ್ನು ಕರೆಯಿಸಿ ಹಾವನ್ನು ರಕ್ಷಣೆ ಮಾಡಲಾಯಿತು’ ಎಂದು ಅವರು ವಿವರಿಸಿದರು.

‘ಮುಂಜಾನೆ 6 ಗಂಟೆಯಲ್ಲಿ ಏಕಾಏಕಿ ಮಳೆ ನೀರಿನ ಜೊತೆ, ಚರಂಡಿನೀರು ಮನೆಗೆ ನುಗ್ಗಿತು. ಕುಟುಂಬಸ್ಥರೆಲ್ಲ ಮನೆಯ ಮಹಡಿಗೆ ಹೋಗಿ ಆಶ್ರಯ ಪಡೆದವು’ ಎಂದು ಮತ್ತೊಬ್ಬ ನಿವಾಸಿ ನೀಲಾ ಘಟನೆಯನ್ನು ವಿವರಿಸಿದರು.

ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್, ಸಹಾಯಕ ಎಂಜಿನಿಯರ್ ನರಸಿಂಹ ನಾಯಕ್ ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿ ಮೂಲಕ ರಾಜಕಾಲುವೆ ಬಳಿ ಹೂಳು ತೆಗೆಸಿದರು. ನಂತರ ನೀರು ಸರಾಗವಾಗಿ ಕೆರೆಯತ್ತ ಹರಿಯಿತು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಿಬಿಎಂಪಿ ಜಂಟಿ ಆಯುಕ್ತ ಅಜಯ್.ವಿ, ’ಕೆರೆಗೆ ಸಮನಾಗಿ ಬಡಾವಣೆ ನಿರ್ಮಿಸಿರುವುದು, ರಾಜ ಕಾಲುವೆ ಪಥ ಬದಲಾಯಿಸಿದ್ದರಿಂದ ಸಮಸ್ಯೆಯಾಗಿದೆ. ಸರ್ವೆ ಇಲಾಖೆ, ಕಂದಾಯ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ಬನಶಂಕರಿ 6ನೇ ಹಂತದಲ್ಲಿರುವ ಶ್ರೀವಾರಿ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ಕುಸಿದಿದೆ

ಬೊಮ್ಮನಹಳ್ಳಿ: ಮನೆಗಳು, ಕಾರ್ಖಾನೆಗೆ ನುಗ್ಗಿದ ಮಳೆ ನೀರು

ಬೊಮ್ಮನಹಳ್ಳಿ: ಶನಿವಾರ ತಡರಾತ್ರಿ ಮತ್ತು ಭಾನುವಾರ ಸುರಿದ ಮಳೆಯಿಂದಾಗಿ ಬನ್ನೇರುಘಟ್ಟ ರಸ್ತೆಯಲ್ಲಿರುವ ನಾರಾಯಣ ನೇತ್ರಾಲಯ ಪಕ್ಕದ ಓ.ಆರ್.ಟೆಕ್ ಟೂಲ್ಸ್ ಕಂಪನಿ ಹಾಗೂ ಸುತ್ತಮುತ್ತಲಿನ ಬಡಾವಣೆಯಲ್ಲಿರುವ ಮನೆಗಳಿಗೆ ನೀರು ನುಗ್ಗಿತು.

ಬಡಾವಣೆ ನಿವಾಸಿಗಳು ಮನೆಗೆ ನುಗ್ಗಿದ ನೀರನ್ನು ಹೊರ ಹಾಕುತ್ತಾ ರಾತ್ರಿ ಪೂರಾ ಜಾಗರಣೆ ಮಾಡುವಂತಾಯಿತು. ಏಕಾಏಕಿ ನೀರು ನುಗ್ಗಿದ್ದರಿಂದ ಟೂಲ್ಸ್‌ ಕಂಪನಿಯ ಯಂತ್ರಗಳು, ಪರಿಕರಗಳು, ದಾಸ್ತಾನು ಮಾಡಿದ್ದ ಕಚ್ಚಾ ವಸ್ತುಗಳು ನೀರಿನಲ್ಲಿ ತೊಯ್ದು ಹೋದವು. 

ಬೇಗೂರು ರಸ್ತೆ, ಬನ್ನೇರುಘಟ್ಟ ರಸ್ತೆಗಳಲ್ಲಿ ಎರಡು ಅಡಿಗೂ ಹೆಚ್ಚು ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು. ಎಂದಿನಂತೆ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ನೀರು ನಿಂತು ಸಂಚಾರ ದಟ್ಟಣೆ ಹೆಚ್ಚಾಗಿತ್ತು. ‘ಇಲ್ಲಿ ಪ್ರತಿ ಮಳೆಯಲ್ಲೂ ನೀರು ನಿಲ್ಲುತ್ತದೆ. ಆದರೆ ಬಿಬಿಎಂಪಿ ಅಧಿಕಾರಿಗಳಿಗೆ ಇದು ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ವಾಹನ ಸವಾರ ಕೆ.ಸಿ.ಪ್ರತಾಪ್ ಆಕ್ರೋಶ
ವ್ಯಕ್ತಪಡಿಸಿದರು.

ಟೂಲ್ಸ್ ಕಂಪನಿಯ ಮಾಲೀಕ ಗೋಪಿನಾಥ್ ‘ನಿನ್ನೆ ರಾತ್ರಿ ಸುರಿದ ಮಳೆಯಿಂದ ಕಾರ್ಖಾನೆಯಲ್ಲಿ ಸಾಕಷ್ಟು ವಸ್ತುಗಳಿಗೆ ಹಾನಿಯಾಗಿದೆ. ಮುಖ್ಯ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು, ಮಳೆಯ ನೀರು ಸೇರುವ ಕಾಲುವೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ಬರುತ್ತದೆ’ ಎಂದು ಹೇಳಿದರು.

ನಮ್ಮ ಕಾರ್ಖಾನೆಯೂ ತಗ್ಗು ಪ್ರದೇಶದಲ್ಲಿ ಇರುವುದರಿಂದ ಪ್ರತಿ ಬಾರಿಯೂ ಮಳೆ ನೀರು ಫ್ಯಾಕ್ಟರಿ ಒಳಗೆ ಬರುತ್ತದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳಿಗೆ ಲಿಖಿತ ದೂರು ದಾಖಲಿಸಿದರೂ ಅಧಿಕಾರಿಗಳು ಇತ್ತ ಸುಳಿದಿಲ್ಲ, ಶಾಸಕರೂ ಇತ್ತ ಗಮನಹರಿಸಿಲ್ಲ ’ ಎಂದು ದೂರಿದರು.

ಮಂತ್ರಿ ಮಾಲ್ ಎದುರುಗಡೆ ಇರುವ ಸಂಪಿಗೆ ರಸ್ತೆಯಲ್ಲಿ ಮಳೆ ನೀರು ತುಂಬಿ ಹರಿಯಿತು ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್

ಕಾಂಪೌಂಡ್‌ ಕುಸಿತ

ಬನಶಂಕರಿ 6ನೇ ಹಂತದಲ್ಲಿ ಬಿಡಿಎ ಬಡಾವಣೆಯ ಪಕ್ಕದಲ್ಲಿ ಹೊಸತಾಗಿ ನಿರ್ಮಾಣಗೊಂಡಿರುವ ಶ್ರೀವಾರಿ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ ಕುಸಿದಿದೆ.  ಅಪಾರ್ಟ್‌ಮೆಂಟ್‌ನ ಸುತ್ತ ಸುಮಾರು 12 ಅಡಿ ಮಣ್ಣು ತುಂಬಿಸಿ ಕಾಂಪೌಂಡ್‌ ನಿರ್ಮಿಸಲಾಗಿದೆ. ಕಾಂಪೌಂಡ್‌ಗೆ ಪಿಲ್ಲರ್‌ಗಳನ್ನು ನಿರ್ಮಿಸದೇ ಇರುವುದರಿಂದ ಮತ್ತು ಮಣ್ಣು ಸರಿಯಾಗಿ ತುಂಬಿಸದ ಕಾರಣ ಮಳೆಗೆ ಸುಮಾರು 20 ಅಡಿ ಉದ್ದ ಕಾಂಪೌಂಡ್‌ ಕುಸಿದಿದೆ. ಪಕ್ಕದ ತೆಂಗಿನ ಮರಕ್ಕೆ ಆತುಕೊಂಡು ನಿಂತಿದೆ. ಮಳೆ ಮುಂದುವರಿದಿದ್ದು ಅಪಾರ್ಟ್‌ಮೆಂಟ್‌ಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಂಪೇಗೌಡ ಬಡಾವಣೆ 3ನೇ ಹಂತ  ಜಲಾವೃತ

ಕೆಂಗೇರಿ: ಸೂಲಿಕೆರೆ ಪಂಚಾಯಿತಿ ವ್ಯಾಪ್ತಿಯ ರಾಮಸಂದ್ರ ಹಾಗೂ ಹಿರೇಕೆರೆ ಕೋಡಿ ಬಿದ್ದ ಪರಿಣಾಮ ಕೆಂಪೇಗೌಡ ಬಡಾವಣೆಯ ಮೂರು ಮತ್ತು ನಾಲ್ಕನೇ ಹಂತದ ಪ್ರದೇಶಗಳು ಜಲಾವೃತಗೊಂಡವು.

ಕೆಂಪೇಗೌಡ ಬಡಾವಣೆಯ 3ನೇ ಹಂತದಲ್ಲಿ ರಾಜಕಾಲುವೆ ಮೇಲೆ ನಿರ್ಮಿಸಿರುವ ಸೇತುವೆಯ ಮೇಲೂ ನೀರು ಹರಿಯುತ್ತಿದ್ದ ಪರಿಣಾಮ ಸೂಲಿಕೆರೆ, ರಾಮೋಹಳ್ಳಿ, ತಾವರೆಕೆರೆ ಕಡೆ ಸಾಗಬೇಕಿದ್ದ ವಾಹನ ಸವಾರರು ಬದಲಿ ಮಾರ್ಗ ಆಶ್ರಯಿಸುವಂತಾಯಿತು.

ಮಧ್ಯಾಹ್ನದವರೆಗೂ ಮಳೆ ನೀರಿನ ಪ್ರಮಾಣ ಕಡಿಮೆಯಾಗದೆ ಸುತ್ತಮುತ್ತಲ ಜಮೀನಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ಸರಾಗವಾಗಿ ಸಾಗಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹರೀಶ್ ದೂರಿದರು.

ಭಾನುವಾರ ಮುಂಜಾನೆ ಸುರಿದ ಭಾರಿ ಮಳೆಗೆ ದುಬಾಸಿಪಾಳ್ಯ ಕೆರೆ ಬಳಿಯ ಬೃಂದಾನ ಲೇಔಟ್ ಅಕ್ಷರಶಃ ದ್ವೀಪವಾಗಿ ಮಾರ್ಪಟ್ಟಿತ್ತು. ಹತ್ತಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಡಿಯಾಯಿತು.

ರಸ್ತೆ ಬದಿಯ ಹೋಟೆಲ್‌ ಹಾಗೂ ಕಿರಾಣಿ ಅಂಗಡಿ ಸೇರಿದಂತೆ ಹಲವು ಕಾರುಗಳ ಒಳಗೆ ನೀರು ನುಗ್ಗಿದೆ. ಮಳೆ ನೀರಿನೊಂದಿಗೆ ಹಾವೊಂದು ಮನೆಯ ಅಂಗಳ ಸೇರಿದ ಪ್ರಸಂಗವೂ ನಡೆಯಿತು. ಲೇಔಟ್‌ನ ಕೆಲ ಭಾಗಗಳಲ್ಲಿ ಸುಮಾರು ಎರಡರಿಂದ ಮೂರು ಅಡಿಯವರೆಗೂ ನೀರು ನಿಂತ ಪರಿಣಾಮ ದ್ವಿಚಕ್ರ ಹಾಗೂ ಕಾರುಗಳಿಗೆ ಹಾನಿಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.