ADVERTISEMENT

ಏರಿದ ತಾಪಮಾನ: ಪೂರ್ಣ ಬತ್ತಿದ ಹೂಡಿ ಕೆರೆ

ಹ.ಸ.ಬ್ಯಾಕೋಡ
Published 11 ಮಾರ್ಚ್ 2019, 20:16 IST
Last Updated 11 ಮಾರ್ಚ್ 2019, 20:16 IST
ಬತ್ತಿದ ಹೂಡಿ ಕೆರೆಯಲ್ಲಿ ಹೂಳು ಎತ್ತುವ ಕಾರ್ಯ ಆರಂಭಗೊಂಡಿದೆ
ಬತ್ತಿದ ಹೂಡಿ ಕೆರೆಯಲ್ಲಿ ಹೂಳು ಎತ್ತುವ ಕಾರ್ಯ ಆರಂಭಗೊಂಡಿದೆ   

ಮಹದೇವಪುರ: ಎಂದೂ ಬತ್ತದ ಹೂಡಿ ಕೆರೆ ಇದೀಗ ಸಂಪೂರ್ಣವಾಗಿ ಒಣಗಿ ಹೋಗಿದೆ. ಹತ್ತು ವರ್ಷಗಳ ಹಿಂದೆ ಕೆರೆಯಲ್ಲಿ ಶುದ್ಧವಾದ ನೀರಿತ್ತು. ಸುತ್ತಮುತ್ತಲಿನ ರೈತರು ತರಕಾರಿ ಬೆಳೆಯಲು ಕೆರೆಯ ನೀರನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಕೆರೆಯ ನೀರು ಹಂತ ಹಂತವಾಗಿ ಕಲುಷಿತಗೊಳ್ಳತೊಡಗಿತು. ಸುತ್ತಮುತ್ತ ಅನೇಕ ಬಹುಮಹಡಿ ವಸತಿ ಸಮುಚ್ಚಯಗಳು ತಲೆ ಎತ್ತಿದವು. ಅವುಗಳಿಂದ ಹರಿದು ಬರುವ ಕಲುಷಿತ ನೀರು ಕೆರೆಗೆ ಬಂದು ಸೇರತೊಡಗಿತು. ಇದರಿಂದಾಗಿ ಕೆರೆ ಸಂಪೂರ್ಣವಾಗಿ ಕೊಳಕಾಯಿತು. ಈಗ ಮಾತ್ರ ಇಡೀ ಕೆರೆ ಬತ್ತಿ ಹೋಗಿದೆ ಎಂದು ಸ್ಥಳೀಯರಾದ ಹರೀಶ ಬೇಸರ ವ್ಯಕ್ತಪಡಿಸಿದರು.

ಕೆರೆಯಲ್ಲಿ ನೀರಿದ್ದಾಗ ನೂರಾರು ಜಲಪಕ್ಷಿಗಳು ದಿನ ಬೆಳಗಾದರೆ ಬರುತ್ತಿದ್ದವು. ಸಂಜೆಯವರೆಗೂ ಕೆರೆಯ ನೀರಿನಲ್ಲಿ ವಿಹರಿಸುತ್ತಿದ್ದವು. ಅವುಗಳ ಅಂದವನ್ನು ನೋಡುವುದೇ ಒಂದು ಖುಷಿಯಾಗಿತ್ತು. ಆದರೆ ಇಂದು ಕೆರೆ ಬತ್ತಿದ್ದರಿಂದ ಯಾವ ಪಕ್ಷಿಗಳು ಕೆರೆಯ ಬಳಿಗೆ ಸುಳಿಯುತ್ತಿಲ್ಲ. ಇಡೀ ಕೆರೆಯು ಆಟದ ಮೈದಾನದಂತಾಗಿ ಬದಲಾಗಿದೆ ಎಂದು ಮತ್ತೋರ್ವ ನಿವಾಸಿ ವೆಂಕಟೇಶ ಹೇಳಿದರು.

ಹೂಳು ತೆರವು ಆರಂಭ:ಹೂಡಿ ಕೆರೆಯ ಕುರಿತು ಈ ಹಿಂದೆ ಕಳೆದ ನವೆಂಬರ್ ತಿಂಗಳಲ್ಲಿ ಕೆರೆ ಮಲಿನಗೊಂಡು ಕಸದ ತೊಟ್ಟಿಯಂತಾಗಿರುವ ಕುರಿತು ಪತ್ರಿಕೆ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆರೆಯನ್ನು ಶುಚಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ADVERTISEMENT

ಸದ್ಯ ಕೆರೆಯಲ್ಲಿ ಹೂಳು ತೆರೆವುಗೊಳಿಸುವ ಕಾರ್ಯವನ್ನು ಪಾಲಿಕೆ ಮಾಡುತ್ತಿದೆ.

ಕೆರೆಯನ್ನು ಹೂಳು ತೆಗೆದು ಶುಚಿಗೊಳಿಸುವುದರೊಂದಿಗೆ ಕೆರೆಯ ಒತ್ತುವರಿಯಾದ ಕುರಿತು ಗಮನಹರಿಸಬೇಕು. ಕೆರೆಯ ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಬೇಕು. ಭದ್ರತೆಗೆ ಸೂಕ್ತ ಬೇಲಿ ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.