ADVERTISEMENT

ಬೆಂಗಳೂರಿನಲ್ಲಿ ಸಾಲು ಸಾಲು ಕಾರ್ಯಕ್ರಮ: ಹೆಚ್ಚಿದ ವಾಹನ ದಟ್ಟಣೆಗೆ ಜನ ಸುಸ್ತು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 14:18 IST
Last Updated 24 ಫೆಬ್ರುವರಿ 2024, 14:18 IST
ತುಮಕೂರು ರಸ್ತೆಯಲ್ಲಿ ಶನಿವಾರ ಉಂಟಾಗಿದ್ದ ದಟ್ಟಣೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು
ತುಮಕೂರು ರಸ್ತೆಯಲ್ಲಿ ಶನಿವಾರ ಉಂಟಾಗಿದ್ದ ದಟ್ಟಣೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು   

ಬೆಂಗಳೂರು: ನಗರದಲ್ಲಿ ಶನಿವಾರ ಸಾಲು ಸಾಲು ಕಾರ್ಯಕ್ರಮಗಳು ಹಾಗೂ ವಸ್ತು ಪ್ರದರ್ಶನಗಳು ನಡೆದಿದ್ದರಿಂದ ಬಹುತೇಕ ರಸ್ತೆಗಳಲ್ಲಿ ವಾಹನಗಳ ವಿಪರೀತ ದಟ್ಟಣೆ ಉಂಟಾಗಿತ್ತು.

ತಿಂಗಳ ನಾಲ್ಕನೇ ಶನಿವಾರ ರಜಾ ದಿನವಾಗಿದ್ದರಿಂದ ಜನರು, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹಾಗೂ ವಸ್ತು ಪ್ರದರ್ಶನ ವೀಕ್ಷಿಸಲು ತಂಡೋಪತಂಡವಾಗಿ ವಾಹನಗಳಲ್ಲಿ ಹೊರಟಿದ್ದರು. ಬೆಳಿಗ್ಗೆ ಹಾಗೂ ಸಂಜೆ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ದಟ್ಟಣೆ ಕಂಡುಬಂತು.

ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆ ಹಾಗೂ ಹೊರ ವರ್ತುಲ ರಸ್ತೆಗಳಲ್ಲಿ ವಿಪರೀತ ದಟ್ಟಣೆ ಇತ್ತು. ಕಾರುಗಳು, ಬಸ್‌ಗಳು ಹಗೂ ಸರಕು ಸಾಗಣೆ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು. ದಟ್ಟಣೆಯಲ್ಲಿ ಸಿಲುಕಿದ್ದ ವಾಹನಗಳಲ್ಲಿದ್ದ ಜನ ಹೈರಾಣಾದರು.

ADVERTISEMENT

ಐಐಎಸ್ಸಿಯಲ್ಲಿ ಮುಕ್ತ ದಿನ: ಭಾರತೀಯ ವಿಜ್ಞಾನ ಕೇಂದ್ರದಲ್ಲಿ (ಐಐಎಸ್ಸಿ) ಶನಿವಾರ ಮುಕ್ತ ದಿನ ಹಮ್ಮಿಕೊಂಡಿದ್ದರಿಂದ, ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಐಐಎಸ್ಸಿ ಕ್ಯಾಂಪಸ್‌ಗೆ ಹೊಂದಿಕೊಂಡಿರುವ ನ್ಯೂ ಬಿಇಎಲ್ ರಸ್ತೆ, ಸದಾಶಿವನಗರ, ಯಶವಂತಪುರ–ಮಲ್ಲೇಶ್ವರ ರಸ್ತೆ ಹಾಗೂ ಸುತ್ತಮುತ್ತ ವಿಪರೀತ ದಟ್ಟಣೆ ಉಂಟಾಯಿತು.

ದಟ್ಟಣೆ ಉಂಟಾಗುವ ಸಾಧ್ಯತೆ ಅರಿತಿದ್ದ ಪೊಲೀಸರು, ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿದ್ದರು. ಸರ್‌ ಸಿ.ವಿ.ರಾಮನ್ ರಸ್ತೆ, ಟಿ. ಚೌಡಯ್ಯ ರಸ್ತೆ ಹಾಗೂ ಮಾರ್ಗೋಸಾ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿತ್ತು. ಆದರೆ, ಹಲವರು ತಮ್ಮ ವಾಹನಗಳನ್ನು ರಸ್ತೆಗಳಲ್ಲಿಯೇ ನಿಲ್ಲಿಸಿ ಐಐಎಸ್ಸಿ ಕ್ಯಾಂಪಸ್‌ಗೆ ಹೋಗಿದ್ದರು. ಇದರಿಂದಾಗಿ ದಟ್ಟಣೆ ಮತ್ತಷ್ಟು ಹೆಚ್ಚಾಯಿತು.

ತುಮಕೂರು ರಸ್ತೆಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು: ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ, ಪೀಣ್ಯ, ನಾಗಸಂದ್ರ, ಪಾರ್ಲೆ ಟೋಲ್‌ಗೇಟ್ ಹಾಗೂ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ರಸ್ತೆಯಲ್ಲಿ ವಿಪರೀತ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ‘ಇಂಡಿಯಾ ವುಡ್’ ಹಾಗೂ ‘ಇಂಡಿಯಾ ಮ್ಯಾಟ್ರೇಸ್‌ಟೆಕ್’ ಹಮ್ಮಿಕೊಳ್ಳಲಾಗಿತ್ತು. ಎರಡೂ ವಸ್ತು ಪ್ರದರ್ಶನ ವೀಕ್ಷಿಸಲು ಬೆಳಿಗ್ಗೆಯಿಂದಲೇ ಜನರು ಕೇಂದ್ರದತ್ತ ಹೊರಟಿದ್ದರು. ಇದರಿಂದಾಗಿ ವಿಪರೀತ ದಟ್ಟಣೆ ಉಂಟಾಯಿತು. ಪ್ರದರ್ಶನ ವೀಕ್ಷಿಸಿದ ಜನ, ಸಂಜೆ ನಗರದತ್ತ ಹೊರಟಿದ್ದಾಗಲೂ ದಟ್ಟಣೆ ಕಂಡುಬಂತು.

ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಸಮೀಪ ಅತಿಯಾದ ವಾಹನದಟ್ಟಣೆ ಉಂಟಾಯಿತು. ಶನಿವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ವಾಹನ ಸಂಚಾರ ನಿಧಾನಗತಿಯಲ್ಲಿತ್ತು. ‘ಖಾಸಗಿ ಬಸ್‌ಗಳು ರಸ್ತೆಬದಿಯಲ್ಲೇ ಹಗಲು–ರಾತ್ರಿ ನಿಲುಗಡೆಯಾಗಿರುತ್ತವೆ. ಪೊಲೀಸರು ಸ್ಥಳದಲ್ಲೇ ಇದ್ದರೂ ಖಾಸಗಿ ಬಸ್‌ಗಳನ್ನು ಅಲ್ಲಿಂದ ತೆಗೆಸುವುದಿಲ್ಲ. ನಿತ್ಯ ಸಂಜೆಯಾದ ಕೂಡಲೇ ಈ ಸಮಸ್ಯೆ ಹೆಚ್ಚಾಗುತ್ತದೆ’ ಎಂದು ಸ್ಥಳೀಯರು ದೂರಿದರು.

ಟೌನ್‌ಹಾಲ್‌, ಹಡ್ಸನ್‌ ಸರ್ಕಲ್‌, ಕೆ.ಆರ್‌. ವೃತ್ತ, ಅನಿಲ್‌ಕುಂಬ್ಳೆ ವೃತ್ತ, ಕಸ್ತೂರಬಾ ರಸ್ತೆಯಲ್ಲಿ ಅತಿಹೆಚ್ಚಿನ ದಟ್ಟಣೆ ಉಂಟಾಗಿತ್ತು. ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಸಿಗ್ನಲ್‌ನಲ್ಲಿ ನಿಂತ ವಾಹನ ಸವಾರರು ಹೈರಾಣಾದರು.

ಕೆಲ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿದ್ದರಿಂದ, ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಇಂಥ ರಸ್ತೆಗಳಲ್ಲಿ ಸಿಲುಕಿದ್ದ ಜನ, ದಟ್ಟಣೆಯಲ್ಲಿ ಸಿಲುಕಿದ್ದರು.

ಮೆಟ್ರೊ ರೈಲಿನಲ್ಲೂ ಜನಸಂದಣಿ: ಶನಿವಾರ ಸಂಜೆಯಿಂದ ರಾತ್ರಿಯವರೆಗೂ ಮೆಟ್ರೊ ರೈಲಿನಲ್ಲಿ ಜನಸಂದಣಿ ಹೆಚ್ಚಿತ್ತು. ರೈಲಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ನಿಲ್ದಾಣಗಳಲ್ಲೂ ಜನರ ಸಂಖ್ಯೆ ಹೆಚ್ಚಿತ್ತು. 

ಐಐಎಸ್ಸಿ ಕ್ಯಾಂಪಸ್‌ಗೆ ಹೊಂದಿಕೊಂಡಿರುವ ಸದಾಶಿವನಗರ ಠಾಣೆ ವೃತ್ತದ ರಸ್ತೆಯಲ್ಲಿ ಉಂಟಾಗಿದ್ದ ದಟ್ಟಣೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.