ಬೆಂಗಳೂರು: ಆಯುಧಪೂಜೆ ಹಾಗೂ ವಿಜಯದಶಮಿ ರಜೆ ನಿಮಿತ್ತ ಊರಿಗೆ ತೆರಳಿದ್ದ ಸಾವಿರಾರು ಮಂದಿ ಏಕಕಾಲಕ್ಕೆ ನಗರಕ್ಕೆ ವಾಪಸ್ ಆದ ಕಾರಣ ಹೆಬ್ಬಾಳ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಗಳಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆಯವರೆಗೂ ವಿಪರೀತ ವಾಹನ ದಟ್ಟಣೆ ಉಂಟಾಗಿತ್ತು.
ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿದ ವಾಹನಗಳ ಸವಾರರು, ಚಾಲಕರು ಅಕ್ಷರಶಃ ಪರದಾಡಿದರು. ಈ ಮಾರ್ಗದಲ್ಲಿ ಭಾನುವಾರ ಸಂಜೆಯಿಂದಲೂ ದಟ್ಟಣೆ ಇತ್ತು. ಸೋಮವಾರ ಬೆಳಿಗ್ಗೆಯೂ ವಾಹನದಟ್ಟಣೆಯಿಂದ ಸಮಸ್ಯೆ ಆಗಿತ್ತು. ಟೋಲ್ ಗೇಟ್‌ಗಳು ಸೇರಿದಂತೆ ಪ್ರಮುಖ ಜಂಕ್ಷನ್ ನಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು.
ಬೆಂಗಳೂರಿನ ತುಮಕೂರು ರಸ್ತೆ, ಮಾದಾವರದಿಂದ ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದವರೆಗೆ ನಿರಂತರ ದಟ್ಟಣೆ ಉಂಟಾಗಿತ್ತು. ಇದು ಹೊರವರ್ತುಲ ರಸ್ತೆಯ ಎರಡೂ ಪಥಗಳ ಮೇಲೆ ಪರಿಣಾಮ ಬೀರಿತು.
ನೆಲಮಂಗಲದಿಂದಗೊರಗುಂಟೆಪಾಳ್ಯ ತಲುಪಲು ಸುಮಾರು ನಾಲ್ಕು ತಾಸು ಹಿಡಿಯಿತು. ಹೆಬ್ಬಾಳ ಕಡೆಗೆ ಸಾಗುವ ರಸ್ತೆಯಲ್ಲಿ ಸುಮಾರು ಮೂರು ಕಿಲೋಮೀಟರ್ ದೂರದವರೆಗೂ ದಟ್ಟಣೆ ಕಂಡು ಬಂತು.
ಪೀಣ್ಯ ಮೇಲ್ಸೇತುವೆಯಲ್ಲಿ ಸರಕು ಸಾಗಣೆ ವಾಹನ ಕೆಟ್ಟು ನಿಂತ ಕಾರಣ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು. ಇದರಿಂದಾಗಿ ವಾಹನಗಳು ನಿಧಾನವಾಗಿ ಸಂಚರಿಸುವಂತಾಯಿತು.
ಹೆಬ್ಬಾಳ ಜಂಕ್ಷನ್‌ನ ಮೂರು ಭಾಗಗಳಲ್ಲಿ ನಿಧಾನಗತಿಯ ಚಾಲನೆಯಿಂದ ವಾಹನ ಸವಾರರು ಹೈರಾಣಾದರು. ವಿಮಾನ ನಿಲ್ದಾಣದಿಂದ ನಗರಕ್ಕೆ ಒಳಬರುವ
ಮಾರ್ಗದಲ್ಲಿ ವಾಹನ ದಟ್ಟಣೆ ವಿಪರೀತವಾಗಿತ್ತು.
ಮಾರತ್ತಹಳ್ಳಿ– ಇಬ್ಲೂರು ಜಂಕ್ಷನ್‌ಗಳಲ್ಲಿ ವಾಹನಗಳು ಮಂದಗತಿಯಲ್ಲಿ ಸಾಗಿದವು. ಮೈಸೂರು ರಸ್ತೆಯ ಮೇಲ್ಸೇತುವೆ ಹಾಗೂ ನಾಯಂಡಹಳ್ಳಿ ಮೆಟ್ರೊ ನಿಲ್ದಾಣ, ಸ್ಯಾಟಲೈಟ್ ಬಸ್ ನಿಲ್ದಾಣದ
ನಡುವೆ ವಾಹನ ಸಂಚಾರ ನಿಧನವಾಗಿತ್ತು.
‘ಊರಿಗೆ ಹಾಗೂ ಪ್ರವಾಸಿ ತಾಣಗಳಿಗೆ ತೆರಳಿದ್ದವರು ಒಮ್ಮೆಲೇ ನಗರಕ್ಕೆ ಬಂದ ಕಾರಣ ದಟ್ಟಣೆ ಸಮಸ್ಯೆ ಆಗಿತ್ತು. ಸೋಮವಾರ ಸಂಜೆ ವೇಳೆಗೆ ಸಮಸ್ಯೆ ಬಗೆ ಹರಿದಿತ್ತು. ತುಮಕೂರು ರಸ್ತೆಯ ಮೇಲ್ಸೇತುವೆ ಹಾಗೂ ಕೆಳ ರಸ್ತೆಯಲ್ಲಿ ವಾಹನಗಳು ಸುಗಮವಾಗಿ ಸಂಚರಿಸುತ್ತಿವೆ’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.