ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಹಾಗೂ ಬಿಎಂಆರ್‌ಸಿಎಲ್‌ನಿಂದ ಮೆಟ್ರೊ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಮಾರ್ಗದಲ್ಲಿ ವಾಹನ ದಟ್ಟಣೆಯಾಗಲಿದೆ. ಹಾಗಾಗಿ ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ವಿಮಾನ ನಿಲ್ದಾಣ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಹೆಬ್ಬಾಳ ಮೇಲ್ಸೇತುವೆ ಮೇಲೆ ನಿತ್ಯ 2.5 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಮೇಲ್ಸೇತುವೆಯ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವುದರಿಂದ ದಟ್ಟಣೆ ಉಂಟಾಗುತ್ತಿರುತ್ತದೆ.
ಸಂಚಾರ ದಟ್ಟಣೆ ನಿವಾರಿಸಲು ಕೆಲ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೆ.ಆರ್.ಪುರ ಅಪ್ ರ್‍ಯಾಂಪ್‌ನಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ (200 ಮೀಟರ್) ಬಿಡಿಎ ವತಿಯಿಂದ ಮೇಲ್ಸೇತುವೆ ವಿಸ್ತರಣೆ, ಯೋಗೇಶ್ವರ ನಗರ ಕ್ರಾಸ್ (ಕೆಂಪಾಪುರ ಕ್ರಾಸ್) ಕೆ.ಆರ್.ಪುರದಿಂದ ಹೆಬ್ಬಾಳ ಜಂಕ್ಷನ್ ಕಡೆಗೆ, ಕೊಡಿಗೇಹಳ್ಳಿ ಜಂಕ್ಷನ್, ಬ್ಯಾಟರಾಯನಪುರ ಜಂಕ್ಷನ್ ಬಳಿ ಮೆಟ್ರೊ ಕಾಮಗಾರಿ ಹಾಗೂ ಹೆಬ್ಬಾಳ ಪಿಎಸ್ ಜಂಕ್ಷನ್ (ನಗರದ ಕಡೆಗೆ) ಬಿಡಿಎ ವತಿಯಿಂದ ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.
ಕಾಮಗಾರಿ ನಡೆಯುತ್ತಿರುವುದರಿಂದ ದಟ್ಟಣೆ ಅವಧಿಯಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದರಿಂದ ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣ ತಲುಪಲು ಸಾಧ್ಯವಿಲ್ಲ. ಆದ್ದರಿಂದ ನಿಗದಿತ ಅವಧಿಗಿಂತ ಎರಡು ತಾಸು ಮುಂಚಿತವಾಗಿ ಹೊರಡಬೇಕು ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
1. ಕೆ.ಆರ್.ಪುರದಿಂದ ವಿಮಾನ ನಿಲ್ದಾಣ ಕಡೆಗೆ ಪ್ರಯಾಣಿಸುವವರು ಬಳಸಬೇಕಾದ ಮಾರ್ಗ:
* ಕೆ.ಆರ್.ಪುರ ಕಡೆಯಿಂದ ವಿಮಾನ ನಿಲ್ದಾಣ ಕಡೆಗೆ ಚಲಿಸುವ ವಾಹನಗಳು ಹೊರವರ್ತುಲ ರಸ್ತೆಯಲ್ಲಿ ಬಲ ತಿರುವು ಪಡೆದು ಹೆಣ್ಣೂರು ಕ್ರಾಸ್–ಬಾಗಲೂರು ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗಬಹುದು.
*ಹೊರವರ್ತುಲ ರಸ್ತೆಯಲ್ಲಿ ನಾಗವಾರ ಜಂಕ್ಷನ್ ಬಳಿ ಬಲ ತಿರುವು ಪಡೆದು ಥಣಿಸಂದ್ರ–ಹೆಗಡೆನಗರ ಮುಖ್ಯರಸ್ತೆ, ಬೆಳ್ಳಳ್ಳಿ ಸೇತುವೆ–ರೇವಾ ಜಂಕ್ಷನ್ ಮೂಲಕ ಬಲ ತಿರುವು ಪಡೆದು ಬಾಗಲೂರು ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗುವುದು.
*ಕೆ.ಆರ್.ಪುರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ಐಓಸಿ–ಮುಕುಂದ ಚಿತ್ರಮಂದಿರ ರಸ್ತೆಯ ಲಿಂಗರಾಜಪುರ ಮೇಲ್ಸೇತುವೆ ಮಾರ್ಗದ ಮೂಲಕ ನಗರದ ಕಡೆ ಪ್ರವೇಶಿಸಬಹುದು.
* ನಾಗವಾರ ಮತ್ತು ಟ್ಯಾನರಿ ರಸ್ತೆ ಮಾರ್ಗವಾಗಿ ನಗರದ ಕಡೆಗೆ ಪ್ರವೇಶಿಸಬಹುದು.
2. ಬೆಂಗಳೂರು–ಬಳ್ಳಾರಿ ರಸ್ತೆಯಿಂದ ನಗರದ ಕಡೆಗೆ ಬರುವ ಭಾರಿ ಮತ್ತು ಮಧ್ಯಮ ಗಾತ್ರದ ಸರಕು ಸಾಗಾಣಿಕೆ ವಾಹನಗಳು ಬಳಸಬೇಕಾದ ಮಾರ್ಗ:
* ಬೆಂಗಳೂರು–ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳು ದೇವನಹಳ್ಳಿಯ ರಾಣಿ ಕ್ರಾಸ್ ಬಳಿ ಎಡ ತಿರುವು ಪಡೆದು ಹೊಸಕೋಟೆ, ಕೋಲಾರ ಕಡೆಗೆ ಚಲಿಸಬೇಕು.
* ಬೆಂಗಳೂರು–ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳು ದೇವನಹಳ್ಳಿಯ ದೊಡ್ಡಬಳ್ಳಾಪುರ ಕ್ರಾಸ್ ಬಳಿ ಎಡ ತಿರುವು ಪಡೆದು ಹೊಸಕೋಟೆ, ಕೋಲಾರ ಕಡೆಗೆ ಚಲಿಸುವುದು.
* ಬೆಂಗಳೂರು–ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳು ವಿದ್ಯಾನಗರ ಕ್ರಾಸ್ ಬಳಿ ಎಡತಿರುವು ಪಡೆದು ರಜಾಕ್ ಪಾಳ್ಯ–ಬಾಗಲೂರು ಮೂಲಕ ಹೆಣ್ಣೂರು–ಕೆ.ಆರ್.ಪುರಂ ಮಾರ್ಗವಾಗಿ ನಗರದ ಕಡೆಗೆ ಚಲಿಸುವುದು.
* ದೊಡ್ಡಬಳ್ಳಾಪುರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ರಾಜಾನುಕುಂಟೆ ಬಳಿ ಬಲ ತಿರುವು ಪಡೆದು ನೆಲಮಂಗಲ ಕಡೆಗೆ ಚಲಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.