ಬೆಂಗಳೂರು: ಬೆಂಗಳೂರು ಮೆಟ್ರೊ (BMRCL) ಹೆಬ್ಬಾಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹು ಮಾದರಿಯ ಸಾರಿಗೆ ಕೇಂದ್ರಕ್ಕೆ (multi-modal transport hub) ಆದಷ್ಟು ಬೇಗನೆ ಕೆಐಎಡಿಬಿಯಿಂದ ಜಾಗ ಕೊಡಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು ಪತ್ರ ಬರೆದಿದ್ದಾರೆ.
ಪತ್ರದ ಪ್ರತಿಯನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರು ಉತ್ತರ ಕ್ಷೇತ್ರದ ಹೆಬ್ಬಾಳದಲ್ಲಿ ಬಹು ಮಾದರಿಯ ಸಾರಿಗೆ ಕೇಂದ್ರವನ್ನು ನಿರ್ಮಿಸಲು ಯೋಜಿಸುತ್ತಿದೆ. ಅತ್ಯಂತ ಅಗತ್ಯವಿರುವ ಈ ಯೋಜನೆಯು ಜನ ದಟ್ಟಣೆಯನ್ನು ಕಡಿಮೆ ಮಾಡುವುದಲ್ಲದೇ, ಮೆಟ್ರೋ ಬಳಕೆದಾರರಿಗೆ ವೇಗದ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಿದೆ ಎಂದಿದ್ದಾರೆ.
ಬಹು-ಹಂತದ ಪಾರ್ಕಿಂಗ್, ಡಿಪೋ ಸೇರಿದಂತೆ ಅತ್ಯಾಧುನಿಕ ಹಬ್ ನಿರ್ಮಾಣಕ್ಕಾಗಿ 45 ಎಕರೆಯ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ (KIADB) ಮೆಟ್ರೊಗೆ ವರ್ಗಾಯಿಸಲು 2024ರ ಮಾರ್ಚ್ʼನಲ್ಲಿ ಬಿಎಂಆರ್‌ಸಿಎಲ್ ವಿನಂತಿಸಿಕೊಂಡಿತ್ತು. ನಮ್ಮ ಮೆಟ್ರೋದ ಕಾರ್ಯದಕ್ಷತೆ ಹೆಚ್ಚಿಸಲು ಈ ಭೂಮಿ ಅತ್ಯವಶ್ಯಕವಾಗಿದೆ ಎಂದಿದ್ದಾರೆ.
ಸಿಎಂ ಅವರು ತೆಗೆದುಕೊಳ್ಳುವ ಸಮಯೋಚಿತ ನಿರ್ಧಾರವು ಕಾಮಗಾರಿಯ ಹೆಚ್ಚಿನ ವೆಚ್ಚವನ್ನು ನಿಯಂತ್ರಿಸುತ್ತದೆ ಹಾಗೂ ನಾಗರಿಕರ ಜೀವನದ ಗುಣಮಟ್ಟ ಹೆಚ್ಚಿಸುತ್ತದೆ. ಭಾರತ ಸರ್ಕಾರದ ಸಂಪೂರ್ಣ ಬೆಂಬಲದೊಂದಿಗೆ ಬೆಂಗಳೂರನ್ನು ಮತ್ತಷ್ಟು ಅಭಿವೃದ್ಧಿಪಡಿಸೋಣ. ಈ ನಿಟ್ಟಿನಲ್ಲಿ KIADBಯ ಭೂಮಿಯನ್ನು ಶೀಘ್ರವೇ BMRCLಗೆ ವರ್ಗಾಯಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಲೇಕ್ ವ್ಯೂ ಟೂರಿಸಂ ಕಂಪನಿ ಎಂಬ ಕಂಪನಿಯ ಯೋಜನೆಯೊಂದನ್ನು ಕಾರ್ಯಗತಗೊಳಿಸಲು ಅನೇಕ ವರ್ಷಗಳ ಹಿಂದೆಯೇ ಹೆಬ್ಬಾಳದಲ್ಲಿನ 55.1 ಎಕರೆ ಭೂಮಿಯನ್ನು KIADB ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಅದು ಈವರೆಗೆ ಪ್ರಾರಂಭವಾಗಿಲ್ಲ.
ಈ ಜಾಗದಲ್ಲಿನ 45 ಎಕರೆ ಸಾರಿಗೆ ಹಬ್ ಆಗಿ ನಿರ್ಮಾಣ ಮಾಡಲು ಉಪಯುಕ್ತವಾಗಿದ್ದು, ಇಲ್ಲಿ ಬಹು ಮಹಡಿ ಕಾರು ಪಾರ್ಕಿಂಗ್ ಕಟ್ಟಡ, ಆಧುನಿಕ ಡಿಪೋ ಮತ್ತು ಇತರೆ ಮೂಲಸೌಕರ್ಯಕ್ಕಾಗಿ ಬಳಸಿಕೊಳ್ಳಲು ಭೂಮಿ ಹಸ್ತಾಂತರಿಸುವಂತೆ ಸರಕಾರಕ್ಕೆ ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.