ಬೆಂಗಳೂರು: ರೈಲು, ಮೆಟ್ರೊ ರೈಲು, ಉಪನಗರ ರೈಲು, ಬಿಎಂಟಿಸಿ ಬಸ್‌ಗಳು ಹಾದು ಹೋಗುವ ಹೆಬ್ಬಾಳದಲ್ಲಿ ಬಹುಮಾದರಿ ಸಾರಿಗೆ ‘ಹಬ್’ ನಿರ್ಮಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಅದಕ್ಕಾಗಿ 45 ಎಕರೆ ಜಮೀನು ಒದಗಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯನ್ನು ಕೋರಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್– ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೊ ನೀಲಿ ಮಾರ್ಗವು ಹೆಬ್ಬಾಳ ಮೂಲಕ ಹಾದುಹೋಗುತ್ತಿದ್ದು, ಕಾಮಗಾರಿ ನಡೆಯುತ್ತಿದೆ. ಇನ್ನೆರಡು ವರ್ಷದಲ್ಲಿ ಮೆಟ್ರೊ ರೈಲು ಸಂಚಾರ ಆರಂಭಗೊಳ್ಳಲಿದೆ. ಜೆ.ಪಿ.ನಗರದಿಂದ ಕೆಂಪಾಪುರದವರೆಗಿನ ಮೆಟ್ರೊ ಮಾರ್ಗ (ಕಿತ್ತಳೆ ಮಾರ್ಗ) ಅನುಮೋದನೆಯ ಹಂತದಲ್ಲಿದೆ. ಈ ಮಾರ್ಗವೂ ಹೆಬ್ಬಾಳ ಮೂಲಕವೇ ಹೋಗಲಿದೆ. ಹೆಬ್ಬಾಳ–ಸರ್ಜಾಪುರ ಮಧ್ಯದ ಕೆಂಪು ಮಾರ್ಗದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಳ್ಳುತ್ತಿದೆ.
ಹೆಬ್ಬಾಳ ಹೊರತುಪಡಿಸಿ ಮತ್ತೆಲ್ಲಿಯೂ ಈ ರೀತಿ ಮೆಟ್ರೊ ಮೂರು ಮಾರ್ಗಗಳು ಒಂದೆಡೆ ಸಂಧಿಸುವುದಿಲ್ಲ. ಇದರ ಪಕ್ಕದಲ್ಲಿಯೇ ಬೆಂಗಳೂರು ಉಪನಗರ ಯೋಜನೆಯ ಎರಡನೇ ಕಾರಿಡಾರ್ ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ಮಾರ್ಗ (ಮಲ್ಲಿಗೆ ಮಾರ್ಗ) ಹಾದು ಹೋಗುತ್ತಿದೆ. ಇದರ ಕಾಮಗಾರಿಯೂ ನಡೆಯುತ್ತಿದೆ. ಹೆಬ್ಬಾಳ ರೈಲು ನಿಲ್ದಾಣವೂ ಸಮೀಪದಲ್ಲೇ ಇದೆ. ನಗರದ ಪ್ರಮುಖ ಸಾರಿಗೆಗಳಲ್ಲಿ ಒಂದಾಗಿರುವ ಬಿಎಂಟಿಸಿ ಡಿಪೊ ಕೂಡ ಹೆಬ್ಬಾಳದಲ್ಲಿದೆ.
ಎಲ್ಲ ರೀತಿಯ ಸಾರಿಗೆ ಸಂಚಾರ ಇರುವ ಹೆಬ್ಬಾಳವನ್ನು ಬೆಂಗಳೂರಿನ ಸಾರಿಗೆ ಕೇಂದ್ರವನ್ನಾಗಿ ಮಾಡಲು ಮೂಲಸೌಕರ್ಯದ ಅಗತ್ಯವಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) 55 ಎಕರೆ ಜಮೀನು ಇಲ್ಲಿದ್ದು, ಹಿಂದೆ ಬೇರೆ ಯೋಜನೆ ರೂಪಿಸಿದ್ದರೂ ಕಾರ್ಯಗತಗೊಂಡಿಲ್ಲ. ಹಾಗಾಗಿ 45 ಎಕರೆ ಜಮೀನನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಿದರೆ ಸಾರಿಗೆ ಹಬ್ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್ ಕೆಐಎಡಿಬಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
ಮೆಟ್ರೊ ನೀಲಿ ಮಾರ್ಗ ನಿರ್ಮಾಣಕ್ಕಾಗಿ ಕೆಐಎಡಿಬಿ ಜಮೀನು ಅಗತ್ಯವಿದ್ದಾಗ ಎಕರೆಗೆ ₹12 ಕೋಟಿ ಪಾವತಿಸಿ ಜಮೀನು ಪಡೆಯಲಾಗಿತ್ತು. ಈಗ ಅಗತ್ಯ ಇರುವ ಜಮೀನಿಗೆ ಅದೇ ದರದ ಪ್ರಕಾರ ₹540 ಕೋಟಿ ನೀಡಲು ಬಿಎಂಆರ್‌ಸಿಎಲ್ ಸಿದ್ಧವಿದೆ ಎಂದು ಮೆಟ್ರೊ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಪ್ಪಲಿದೆ ದಟ್ಟಣೆ: ‘ಅಧಿಕ ವಾಹನದಟ್ಟಣೆ ಇರುವ ಪ್ರದೇಶಗಳಲ್ಲಿ ಹೆಬ್ಬಾಳವೂ ಒಂದು. ದೇವನಹಳ್ಳಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ವಾಹನದಟ್ಟಣೆಯೇ ದೊಡ್ಡ ಸಮಸ್ಯೆಯಾಗಿದೆ. ಮೆಟ್ರೊ ಆರಂಭವಾದರೆ ಈ ಸಮಸ್ಯೆ ನೀಗಲಿದೆ. ಕೆಂಪಾಪುರದಿಂದ ಜೆ.ಪಿ.ನಗರವನ್ನು ಸಂಪರ್ಕಿಸುವ ಅರ್ಧ ವರ್ತುಲ ಮೆಟ್ರೊ ಮಾರ್ಗವು ಅರ್ಧ ನಗರವನ್ನೇ ಸಂಪರ್ಕಿಸಲಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ. ಸುಲಭ ಸಂಚಾರಕ್ಕೆ ಪ್ರಯಾಣಿಕರಿಗೆ ಅನುಕೂಲವಾಗಲು ಒಂದೆಡೆ ಎಲ್ಲ ಸಾರಿಗೆ ವ್ಯವಸ್ಥೆಗಳು ಸಿಕ್ಕಿದರೆ ಸಾಕಾಗುವುದಿಲ್ಲ. ಪಾರ್ಕಿಂಗ್ ಸಹಿತ ಎಲ್ಲ ಸೌಕರ್ಯಗಳು ಇದ್ದಾಗ ಮಾತ್ರ ಉಪಯೋಗವಾಗುತ್ತದೆ. ಅದಕ್ಕಾಗಿ ಪತ್ರ ಬರೆಯಲಾಗಿದೆ’ ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
- ಅನುಮತಿಯ ನಿರೀಕ್ಷೆಯಲ್ಲಿ ಬಿಎಂಆರ್‌ಸಿಎಲ್
‘ಬಹು ಮಹಡಿ ಪಾರ್ಕಿಂಗ್ ವ್ಯವಸ್ಥೆ ಡಿಪೊ ಎಲ್ಲ ಸಾರಿಗೆಗಳನ್ನು ಒಂದು ಸಂಯೋಜನೆಯಡಿ ತರಲು ಸಂಪರ್ಕ ಕೊಂಡಿ ನಿರ್ಮಾಣ ಮಾಡಲು 45 ಎಕರೆ ಜಮೀನು ಅಗತ್ಯವಿದೆ. ಸರ್ಕಾರವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಈ ಜಮೀನನ್ನು ನಮಗೆ ಹಸ್ತಾಂತರಿಸಿದರೆ ಹೆಬ್ಬಾಳವು ಸಾರಿಗೆಯ ಅತ್ಯಾಧುನಿಕ ಹಬ್ ರೂಪವನ್ನು ಪಡೆಯಲಿದೆ’ ಎಂದು ಬಿಎಂಆರ್‌ಸಿಎಲ್ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಚನ್ನಪ್ಪ ಗೌಡರ್ ತಿಳಿಸಿದರು. ‘ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಈ ಬಗ್ಗೆ ಪತ್ರ ಬರೆದಿದ್ದೇವೆ. ಇಲಾಖೆಯ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ಈ ಯೋಜನೆಗೆ ಒಪ್ಪಿಗೆ ಸಿಕ್ಕಿದ ಕೂಡಲೇ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.