ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿನಾಯಿಗಳ ಹಿಂಡು!

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 23:48 IST
Last Updated 12 ನವೆಂಬರ್ 2024, 23:48 IST
   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ನಿತ್ಯವೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಟರ್ಮಿನಲ್‌–1 ಹಾಗೂ ಹೊಸದಾಗಿ ನಿರ್ಮಿಸಲಾದ ಟರ್ಮಿನಲ್‌–2ರ ಆಗಮನ ಮತ್ತು ನಿರ್ಗಮನ ದ್ವಾರಗಳ ಬಳಿ ಬೀದಿ ನಾಯಿಗಳು ಬೀಡು ಬಿಟ್ಟಿರುತ್ತವೆ. ಪ್ರಯಾಣಿಕರು ವಿಶ್ರಾಂತಿ ಪಡೆಯಲು ನಿರ್ಮಿಸಲಾದ ಲಾಂಜ್ ಪ್ರದೇಶಗಳಲ್ಲಿ ಬೀದಿ ನಾಯಿಗಳು ಕೂಡ ವಿಶ್ರಾಂತಿ ಪಡೆಯುತ್ತವೆ.

ನಿಲ್ದಾಣದಲ್ಲಿ ಬೀದಿನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಪ್ರಯಾಣಿಕರು ಆತಂಕದ ಜೊತೆಗೆ ಆಕ್ರೋಶ ಹೊರ ಹಾಕಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಪ್ರಯಾಣಿಕರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಒತ್ತಾಯಿಸಿದ್ದಾರೆ. 

ADVERTISEMENT

ಕೋಹಂಸೋಹಂ ಎಂಬುವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವ ಬೀದಿನಾಯಿಗಳ ಚಿತ್ರಗಳನ್ನು ತೆಗೆದು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ‘ಟರ್ಮಿನಲ್–2ರಲ್ಲಿ ನಾಯಿಗಳದ್ದೇ ಕಾರುಬಾರು’ ಎಂದು ಬರೆದುಕೊಂಡಿದ್ದಾರೆ. 

ಆಹಾರ ಮಳಿಗೆಗಳಿಂದ ತಿಂಡಿ ಮತ್ತು ತಿನಿಸು ತೆಗೆದುಕೊಂಡು ಹೋಗುವವರನ್ನು ನಾಯಿಗಳು ಹಿಂಬಾಲಿಸುತ್ತವೆ. ಪ್ರಾಣಿಪ್ರಿಯರು  ಆಹಾರ ನೀಡುತ್ತಾರೆ. ಯಾವುದೇ ಆಹಾರ ಸಿಗದಿದ್ದಾಗ ಮತ್ತು ಯಾರೂ ಆಹಾರ ನೀಡದಿದ್ದಾಗ ಜೋರಾಗಿ ಬೊಗಳುತ್ತವೆ. ನಾಯಿಗಳನ್ನು ಕಂಡು ಹೆದರುವ ಕೆಲವು ಪ್ರಯಾಣಿಕರು ಅವುಗಳಿಂದ ತಪ್ಪಿಸಿಕೊಳ್ಳಲು ಸಾಹಸ ಮಾಡಬೇಕಾಗುತ್ತದೆ.

‘ವಿಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ಬೀದಿನಾಯಿಗಳು ಎಲ್ಲೆಂದರಲ್ಲಿ ಬೀಡುಬಿಟ್ಟಿದ್ದು ಇಲ್ಲಿ ಕೆಲಸ ಮಾಡುವ ಸಿಬ್ಬಂದಿ, ವಿಮಾನಕ್ಕಾಗಿ ಬರುವ ಪ್ರಯಾಣಿಕರು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರಿಂದಾಗಿ ನಿಲ್ದಾಣದ ಸ್ವಚ್ಛತೆ ಹಾಗೂ ಭದ್ರತೆಗೆ ಧಕ್ಕೆಯಾಗಿದೆ. ಸಂಬಂಧ ಪಟ್ಟವರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಬೆಂಗಳೂರಿನ ವಸಂತ್‌ ಎಂಬುವರು ಮನವಿ ಮಾಡಿದ್ದಾರೆ. 

‘ಕಾನೂನು ತೊಡಕು’

‘ಬೀದಿನಾಯಿಗಳ ಹಾವಳಿಯಿಂದ ಸಮಸ್ಯೆ ಎದುರಿಸಿದ ಪ್ರಯಾಣಿಕರಿಗೆ ಕ್ಷಮೆ ಕೋರುತ್ತೇವೆ. ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟ ನಾಯಿಗಳ ಸಮಸ್ಯೆ ನಿವಾರಣೆಗೆ ವಿಮಾನ ನಿಲ್ದಾಣದ ಕಾರ್ಯಾಚರಣೆ ತಂಡವು ಸ್ಥಳೀಯ ಸಂಸ್ಥೆ ಮತ್ತು ಬಿಬಿಎಂಪಿ ಜೊತೆಗೆ  ಕಾರ್ಯಪ್ರವೃತ್ತವಾಗಿದೆ. ವಿಮಾನ ನಿಲ್ದಾಣದಲ್ಲಿರುವ ನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಲು ಕಾನೂನು ತೊಡಕು ಇದೆ. ಆದಾಗ್ಯೂ, ಬೀದಿ ನಾಯಿಗಳಿಗೆ ಲಸಿಕೆ ಮತ್ತು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ‘ಎಂದು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.