ಬೆಂಗಳೂರು: ಇಂದು ನವದೆಹಲಿಯಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಹೊಸದಾಗಿ ಮೂರು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಿದ್ದಾರೆ.
ಇದರಲ್ಲಿ ಬೆಂಗಳೂರು–ತಮಿಳುನಾಡಿನ ಮಧುರೈ ನಡುವೆ ಸಂಚರಿಸುವ ಹೊಸ ವಂದೇ ಭಾರತ್ ರೈಲೂ ಸೇರಿದೆ.
ಕೇಸರಿ ಬಣ್ಣದ ಈ ಹೊಸ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಮಧುರೈ– ಬೆಂಗಳೂರು, ಬೆಂಗಳೂರು–ಮಧುರೈ ನಡುವೆ ಸಂಚರಿಸಲಿದೆ.
ಬೆಳಿಗ್ಗೆ 5.15 ಕ್ಕೆ ಮಧುರೈ ಜಂಕ್ಷನ್ ನಿಲ್ದಾಣದಿಂದ ಹೊರಡುವ ರೈಲು (Train Number 20671) ದಿಂಡಿಗಲ್–ತಿರುಚ್ಚಿ–ಕರೂರು–ನಾಮಕ್ಕಲ್–ಸೇಲಂ–ಕೆ.ಆರ್.ಪುರಂ ಮಾರ್ಗವಾಗಿ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ಅದೇ ದಿನದ ಮಧ್ಯಾಹ್ನ 1 ಗಂಟೆಗೆ ತಲುಪಲಿದೆ. ಸರಿ ಸುಮಾರು 8 ಗಂಟೆ ಪ್ರಯಾಣದ ಅವಧಿಯಾಗಿರುತ್ತದೆ. ಮಧುರೈ– ಬೆಂಗಳೂರು ಟಿಕೆಟ್ ದರ ₹1,575
ಮಂಗಳವಾರ ಹೊರತುಪಡಿಸಿ ವಾರದ ಆರು ದಿನ ಮಧ್ಯಾಹ್ನ 1.30 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಹೊರಡುವ ರೈಲು (Train Number 20672) ಕೆ.ಆರ್.ಪುರಂ–ಸೇಲಂ–ನಾಮಕ್ಕಲ್–ಕರೂರು–ತಿರುಚ್ಚಿ–ದಿಂಡಿಗಲ್ ಮಾರ್ಗವಾಗಿ ಮಧುರೈ ಜಂಕ್ಷನ್ ಅನ್ನು ಅದೇ ದಿನ ರಾತ್ರಿ 9.45 ಕ್ಕೆ ತಲುಪಲಿದೆ. ಸರಿ ಸುಮಾರು 8 ಗಂಟೆ ಪ್ರಯಾಣದ ಅವಧಿಯಾಗಿರುತ್ತದೆ. ಬೆಂಗಳೂರು–ಮಧುರೈ ಟಿಕೆಟ್ ದರ ₹1,575
ಈ ವೇಳಾಪಟ್ಟಿಯನ್ನು ರೈಲ್ವೆ ಸಚಿವಾಲಯ ತನ್ನ ಎಕ್ಸ್ ತಾಣದಲ್ಲಿ ಹಂಚಿಕೊಂಡಿದೆ.
ಬೆಂಗಳೂರು–ಮಧುರೈ ನಡುವೆ 521 ಕಿ.ಮೀ ಅಂತರವಿದೆ. ಐತಿಹಾಸಿಕ ಹಾಗೂ ದೇವಾಲಯಗಳ ನಗರಿ ಎಂದು ಮಧುರೈ ಖ್ಯಾತಿಯಾಗಿದ್ದು ಕರ್ನಾಟಕದಿಂದ ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿಗೆ ಪ್ರವಾಸಿಗರು, ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.