ಹೆಸರಘಟ್ಟ: ಸರ್ಕಾರಿ ಭೂಮಿ ಮತ್ತು ಕೆರೆ ಒತ್ತುವರಿ ಮಾಡಿಕೊಂಡವರ ವಿರುದ್ಧ ಕಸಘಟ್ಟಪುರ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
‘ಕುಂಬಾರಹಳ್ಳಿ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಮೂರು ಅಂತಸ್ತಿನ ಕಟ್ಟಡವನ್ನು ಕಟ್ಟಲಾಗಿದೆ. ಕೆರೆ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.
‘ಸೋಲದೇವನಹಳ್ಳಿ ಸರ್ಕಾರಿ ಶಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಅಂಗಡಿ ಮಾಡಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಒತ್ತುವರಿ ತೆರವುಗೊಳಿಸಿ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡಿ’ ಎಂದು ಸೋಲದೇವನಹಳ್ಳಿಯ ವೀರಣ್ಣ ಮನವಿ ಮಾಡಿದರು.
‘ಸೋಲದೇವನಹಳ್ಳಿ ಗ್ರಾಮದ ಬಿ ಖರಾಬ್ ಜಾಗದಲ್ಲಿದ್ದ ಹಳ್ಳ ಕೊಳ್ಳಗಳನ್ನು ಮುಚ್ಚಿ, ಬಡಾವಣೆ ನಿರ್ಮಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ’ ಎಂದು ಆರೋಪಿಸಿದರು.
‘ಕೆಂಪಾಪುರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡದ ಕೆಲಸ ಮುಗಿದು ಅರು ತಿಂಗಳುಗಳು ಕಳೆದಿವೆ. ಆದರೆ, ಉದ್ಘಾಟನೆಯಾಗಿಲ್ಲ. ಮಕ್ಕಳನ್ನು ಹಳೆಯ ಕಟ್ಟಡದಲ್ಲಿಯೇ ಕೂರಿಸಿದ್ದಾರೆ. ಇಲ್ಲೂ ರಾಜಕೀಯ ಬೇಕೆ?’ ಎಂದು ಕೆಂಪಾಪುರ ಗ್ರಾಮದ ಕಿರಣ್‍ಕುಮಾರ್ ಪ್ರಶ್ನಿಸಿದರು.
‘ಶ್ರಾವಣ ಮಾಸದಲ್ಲಿ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಲಾಗುವುದು’ ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಮಜಾಯಿಷಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.