ಹೆಸರಘಟ್ಟ: ಗ್ರಾಮದ ಕೆರೆ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕೆರೆಯೊಳಗೆ ಏಳು ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಎರಡು ಕೊಳವೆಬಾವಿಗಳಲ್ಲಿ ನೀರಿಲ್ಲ. ಉಳಿದ ಐದು ಕೊಳವೆ ಬಾವಿಗಳಲ್ಲಿ ನೀರು ತಳಮಟ್ಟ ತಲುಪಿದ್ದು, ನೀರು ಕುಡಿಯಲು ಯೋಗ್ಯವಾಗಿಲ್ಲ. ಹೆಸರಘಟ್ಟ, ದಾಸನೇಹಳ್ಳಿ, ಗುಡ್ಡದ ಹಳ್ಳಿ ಗ್ರಾಮಗಳಿಗೆ ಈ ಕೊಳವೆ ಬಾವಿಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ನೀರಿಲ್ಲದ ಕಾರಣ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿದೆ.
‘ಹೆಸರಘಟ್ಟ ಕೆರೆಯ ಹೂಳನ್ನು ಸರಿಯಾಗಿ ತೆಗೆದು ನಿರ್ವಹಣೆ ಮಾಡಿದ್ದರೆ ಇನ್ನೂ ಕೆಲವು ತಿಂಗಳ ಕಾಲ ನೀರು ನಿಂತಿರುತ್ತಿತ್ತು. ಸರಿಯಾದ ನಿರ್ವಹಣೆ ಇಲ್ಲದೇ ನೀರು ಆವಿಯಾಗಿ ಹೋಗಿದೆ. ಕೇವಲ ಆರು ತಿಂಗಳಲ್ಲಿ 14 ಅಡಿ ನೀರು ಬತ್ತಿ ಹೋಗಿದೆ. ಕೆರೆಯನ್ನು ಅಭಿವೃದ್ಧಿಪಡಿಸಿದರೆ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುತ್ತಿರಲಿಲ್ಲ’ ಎಂದು ಗ್ರಾಮದ ನಿವಾಸಿ ಬಿಳಿಜಾಜಿ ಗೋವಿಂದರಾಜು ಹೇಳಿದರು.
‘ಎರಡು ನೀರಿನ ಘಟಕಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗಿದೆ. ಗ್ರಾಮದಲ್ಲಿರುವ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಪ್ರತಿದಿನ ಐದರಿಂದ ಆರು ಲಕ್ಷ ಲೀಟರ್ ನೀರನ್ನು ಗ್ರಾಮಗಳಿಗೆ ಒದಗಿಸಬೇಕಾಗಿದೆ. ಅಷ್ಟು ನೀರು ಈಗ ಲಭ್ಯವಾಗಿಲ್ಲ. ಇರುವ ನೀರನ್ನು ಜನರಿಗೆ ತಲುಪಿಸಲಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀನಿವಾಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.