ಬೆಂಗಳೂರು: ಹೆಸರಘಟ್ಟ ಹೋಬಳಿ ತರಬನಹಳ್ಳಿ, ಐವರಕಂಡಪುರ, ತಮ್ಮರಸನಹಳ್ಳಿ ಗ್ರಾಮಗಳ ದಲಿತ ಮನೆಗಳಿಗೆ ಭಾಗ್ಯ ಜ್ಯೋತಿ ಯೋಜನೆ ಅಡಿ ವಿದ್ಯುತ್ ಸಂಪರ್ಕವನ್ನು ನೀಡಲು ಬೆಸ್ಕಾಂ ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ.
‘ಹುರುಳಿ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿಯು ನಾಲ್ಕು ತಿಂಗಳ ಹಿಂದೆ ಮೂರು ಗ್ರಾಮಗಳಿಂದ 22 ಫಲಾನುಭವಿಗಳನ್ನು ಪಟ್ಟಿ ಮಾಡಿ, ಗುತ್ತಿಗೆದಾರ ಅಖಿಲ್ ಅವರಿಗೆ ನೀಡಿದೆ. ಅವರು ಅಗತ್ಯ ದಾಖಲೆಗಳೊಂದಿಗೆ ಬೆಸ್ಕಾಂ ಕಚೇರಿಗೆ ಸಲ್ಲಿಸಿದ್ದಾರೆ. ಆದರೆ ಬೆಸ್ಕಾಂನ ಸಹಾಯಕ ಎಂಜಿನಿಯರ್ ವಿದ್ಯುತ್ ಸಂಪರ್ಕ ಕೊಡಲು ವಿಳಂಬ ಮಾಡುತ್ತಿದ್ದಾರೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮನೆ ಕಟ್ಟಿಸಿ ಒಂದು ವರ್ಷ ಆಗಿದೆ. ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಬರುತ್ತದೆ ಎಂದು ಕಾದು ಮೇಣದ ಬತ್ತಿಯಲ್ಲಿಯೇ ದಿನಗಳನ್ನು ಕಳೆಯುತ್ತಿದ್ದೇವೆ’ ಎಂದು ಐವರಕಂಡಪುರ ಗ್ರಾಮದ ರತ್ನಮ್ಮ ತಮ್ಮ ಸಮಸ್ಯೆಯನ್ನು ತೋಡಿಕೊಂಡರು.
‘ನಾಲ್ಕು ತಿಂಗಳಿನಿಂದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ದಾಖಲೆಗಳ ಪರಿಶೀಲನೆಗೆ ನಾಲ್ಕು ತಿಂಗಳು ಬೇಕೇ?’ ಎಂದು ತರಬನಹಳ್ಳಿ ಮುನಿರತ್ನಮ್ಮ ಪ್ರಶ್ನಿಸಿದರು.
ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಾಸನಾಯ್ಕ ಪ್ರತಿಕ್ರಿಯಿಸಿ, ‘ಗುತ್ತಿಗೆದಾರ ದಾಖಲೆಗಳನ್ನು ಸಲ್ಲಿಸಿರುವುದಕ್ಕೆ ವಿಳಂಬವಾಗಿದೆ. ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.