ADVERTISEMENT

ಬೆಂಗಳೂರು | ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು: ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 0:30 IST
Last Updated 8 ಅಕ್ಟೋಬರ್ 2024, 0:30 IST
ಹೆಸರಘಟ್ಟ ಹುಲ್ಲುಗಾವಲು
ಹೆಸರಘಟ್ಟ ಹುಲ್ಲುಗಾವಲು   

ಬೆಂಗಳೂರು: ಬೆಂಗಳೂರು ನಗರದ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ‘ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ ನೀಡಿದೆ.

ಸಭೆಯ ಬಳಿಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

‘ಹೆಸರಘಟ್ಟವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಆಂದೋಲನವೂ ನಡೆದಿತ್ತು. ಪ್ರಕೃತಿ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ’ ಎಂದು ಹೇಳಿದರು.

ADVERTISEMENT

‘2021ರ ಜನವರಿ 19 ರಂದು ನಡೆದಿದ್ದ 15 ನೇ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾವವನ್ನು ತಿರಸ್ಕರಿಸಲಾಗಿತ್ತು. ರಾಜ್ಯ ಹೈಕೋರ್ಟ್‌ ಈ ಕುರಿತು ಪುನರ್‌ ನಿರ್ಣಯ ಕೈಗೊಳ್ಳುವಂತೆಯೂ ಸೂಚಿಸಿತ್ತು. ಬೆಂಗಳೂರು ಕಾಂಕ್ರೀಟ್‌ ಕಾಡಾಗಿ ಮಾತ್ರ ಬೆಳೆಯದೇ, ಹಚ್ಚ ಹಸುರಿನ ತಾಣವಾಗಿಯೂ ಉಳಿಯಬೇಕು ಎಂಬ ಮಹತ್ವದ ಉದ್ದೇಶದಿಂದ ನಮ್ಮ ಸರ್ಕಾರ ಈ ನಿರ್ಧಾರ ಕೈಗೊಂಡಿದೆ’ ಎಂದರು.

‘ಹೆಸರಘಟ್ಟ ಹುಲ್ಲುಗಾವಲಿನ 356 ಎಕರೆ, ಬೈರಾಪುರ ಕೆರೆಯ 383 ಎಕರೆ, ಬ್ಯಾತ ಕೆರೆಯ 165 ಎಕರೆ, ಹೆಸರಘಟ್ಟ ಕೆರೆಯ 1,356 ಎಕರೆ ಮತ್ತು ಪಶುಸಂಗೋಪನಾ ಇಲಾಖೆಯ ಸ್ವಾಧೀನದಲ್ಲಿರುವ 2,750 ಎಕರೆ ಸೇರಿ ಒಟ್ಟು 5,010 ಎಕರೆ ಪ್ರದೇಶವನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ಸೆಕ್ಷೆನ್‌ 36 ಎ ಪ್ರಕಾರ ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶವನ್ನಾಗಿ ಘೋಷಿಸಲು ಸಭೆ ಸಮ್ಮತಿಸಿದೆ’ ಎಂದು ಅವರು ವಿವರಿಸಿದರು.

‘1,912 ಎಕರೆಯಷ್ಟು ವಿಸ್ತಾರವಾದ ಹೆಸರಘಟ್ಟ ಕೆರೆಯಂಗಳವಿದೆ. ಈ ಕೆರೆಯಂಗಳದ ಸುತ್ತ ಇರುವ 356 ಎಕರೆ ಪ್ರದೇಶ ಬೆಂಗಳೂರಿನಲ್ಲಿ ಉಳಿದಿರುವ ಕೊನೆಯ ಹುಲ್ಲುಗಾವಲು ಆವಾಸಸ್ಥಾನ. ಈ ಪ್ರದೇಶದಲ್ಲಿ 235 ಪ್ರಭೇದದ ಪಕ್ಷಿಗಳು, 400 ಪ್ರಭೇದದ ಕೀಟಗಳು, 100 ವಿಧದ ಚಿಟ್ಟೆಗಳು ಕಾಣಸಿಗುತ್ತವೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ. ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು’ ಎಂಬುದು ಪರಿಸರ ಪ್ರೇಮಿಗಳ ವಾದ.

ಹೆಸರಘಟ್ಟ ಪ್ರದೇಶದ ಮಹತ್ವ 

  • ಹೆಸರಘಟ್ಟದ ಹುಲ್ಲುಗಾವಲು ಪರಿಸರ ಸೂಕ್ಷ್ಮ ವಲಯ 

  • ಅಂತರ್ಜಲ ವೃದ್ಧಿಗೆ ಇಂತಹ ಹುಲ್ಲುಗಾವಲು ಪ್ರದೇಶ ತೀರಾ ಅವಶ್ಯಕ 

  • ದಕ್ಷಿಣ ಭಾರತದ ಪ್ರಮುಖ ಕನ್ನೌಲ್‌ ಹಕ್ಕಿ (ಲೆಸ್ಸೆರ್‌ ಫ್ಲೊರಿಕನ್) ಜವುಗು ಸೆಳೆವ (ಮಾರ್ಷ್‌ ಹ್ಯಾರಿಯರ್) ಮೊಂಟಾಗು ಹ್ಯಾರಿಯರ್ ನೆಲಗುಬ್ಬಿ (ಲಾರ್ಕ್‌‌) ಸೇರಿದಂತೆ 120 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಇಲ್ಲಿವೆ 

  • ರಷ್ಯಾ– ಮಧ್ಯ ಏಷ್ಯಾದಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ

  • ಕಾಡುಪಾಪ ಗುಳ್ಳೇನರಿ ಮುಂಗುಸಿಯಂತಹ ಹಲವು ವನ್ಯಜೀವಿಗಳ ವಾಸಸ್ಥಾನ * ಅಪರೂಪದ ಲೈಲ್ಯಾಕ್‌ ಸಿಲ್ವರ್‌ ಲೈನ್‌ ಚಿಟ್ಟೆಗಳು ಈ ಪ್ರದೇಶದಲ್ಲಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.