ADVERTISEMENT

ದಶಮಿಗೆ ಮೆರಗು ತಂದ ತೆಪ್ಪೋತ್ಸವ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 20:10 IST
Last Updated 8 ಅಕ್ಟೋಬರ್ 2019, 20:10 IST
ಹೆಸರಘಟ್ಟ ಗ್ರಾಮದ ಕೆರೆ ಏರಿ ಮೇಲಿರುವ ದುರ್ಗಮ್ಮ ದೇವಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು
ಹೆಸರಘಟ್ಟ ಗ್ರಾಮದ ಕೆರೆ ಏರಿ ಮೇಲಿರುವ ದುರ್ಗಮ್ಮ ದೇವಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು   

ಹೆಸರಘಟ್ಟ: ನೂರೆಂಟು ಕಳಸಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಂಭ್ರಮದಿಂದ ಹೆಜ್ಜೆ ಇಟ್ಟ ಮಹಿಳೆಯರು, ಕೊಂಬು ಕಹಳೆಗಳ ಝೇಂಕಾರ, ಭಕ್ತಿ ಪರವಶತೆಯಿಂದ ಕುಣಿದ ಗ್ರಾಮಸ್ಥರು, ಚಿಣ್ಣರ ಸಂತಸದ ಓಡಾಟ, ಹೂವಿನಿಂದ ಅಲಂಕೃತಗೊಂಡು ಕೆರೆ ತುಂಬಿ ಚಿತ್ತಾರ ಮೂಡಿದ ತೆಪ್ಪ.

ಗ್ರಾಮದ ಕೆರೆ ಏರಿಯ ಮೇಲಿರುವ ದುರ್ಗಮ್ಮ ದೇವಿಯ ತೆಪ್ಪೋತ್ಸವದಲ್ಲಿ ಮೇಳೈಸಿದ ದೃಶ್ಯಗಳಿವು.

ವಾರದಿಂದ ಸುರಿದ ಮಳೆಯಿಂದ ಕೆರೆಗೆ ಅರ್ಧ ಅಡಿಯಷ್ಟು ನೀರು ಬಂದಿತ್ತು. ಆ ನೀರಿನಲ್ಲಿಯೇ ದೇವಿಯ ಮೂರ್ತಿಯನ್ನು ತೆಪ್ಪದಲ್ಲಿಟ್ಟು ಕೆರೆಯ ತುಂಬಾ ಓಡಾಡಿಸಿ ಗ್ರಾಮಸ್ಥರು ಸಂಭ್ರಮಿಸಿದರು. ಪಲ್ಲಕ್ಕಿಯಲ್ಲಿ ಇಟ್ಟು ಕೆರೆಯ ಏರಿಯ ಮೇಲೆ ವಿವಿಧ ವಾದ್ಯಗಳ ಸಮೇತ ಮೆರವಣಿಗೆ ಮಾಡಿದರು. ನೂತನ ದಂಪತಿಗಳು ಸಂತಾನ ಭಾಗ್ಯಕ್ಕಾಗಿ ದೇವಿಗೆ ಬಾಳೆಹಣ್ಣು ಅರ್ಪಿಸಿದರು.

ADVERTISEMENT

ಕೆರೆ ತುಂಬುವಷ್ಟು ಮಳೆಯಾಗಲಿ ಎಂದು ದೇವರಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಕಾಕೋಳು, ಬ್ಯಾತ, ಸೀರೆಸಂದ್ರ, ಶಿವಕೋಟೆ ಗ್ರಾಮಗಳ ಒಕ್ಕಲಿನ ಭಕ್ತರು ದೇವಿಗೆ ಎಡೆಗಳನ್ನು ಸರ್ಮಪಿಸಿದರು. ದನಕರುಗಳ ಯೋಗಕ್ಷೇಮಕ್ಕಾಗಿ ಮೊಸರು ಮತ್ತು ಹಾಲಿನ ನೇವೈದ್ಯ ಮಾಡಲಾಯಿತು.

ತೆಪ್ಪೋತ್ಸವಕ್ಕೆ ಹುಟ್ಟು ಹಾಕುವ ಮೂಲಕ ಚಾಲನೆ ನೀಡಿದ ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ, ‘ಗ್ರಾಮೀಣ ಭಾಗಗಳಲ್ಲಿ ಆಚರಿಸಲ್ಪಡುವ ಹಬ್ಬಗಳು ವ್ಯಕ್ತಿಗಳ ಮನಸ್ಸುಗಳನ್ನು ಹತ್ತಿರ ಮಾಡುತ್ತವೆ. ಅಲ್ಲದೇ ಅವರಲ್ಲಿ ಸಾಮರಸ್ಯ ಮೂಡಿಸುತ್ತವೆ’ ಎಂದರು.

‘ಕೆರೆಯಲ್ಲಿ ನೀರು ಬಂದರೆ ಮಾತ್ರ ತೆಪ್ಪೋತ್ಸವವನ್ನು ಮಾಡಲಾಗುತ್ತದೆ. ಕಳೆದ ಮೂರು ವರ್ಷಗಳಿಂದ ತೆಪ್ಪೋತ್ಸವಕ್ಕೆ ಬೇಕಾಗುವಷ್ಟು ನೀರು ಕೆರೆಯಲ್ಲಿ ಸಂಗ್ರಹವಾಗುತ್ತಿದೆ. ತೆಪ್ಪೋತ್ಸವಕ್ಕೆ ಸುಮಾರು ಐವತ್ತು ವರ್ಷಗಳ ಇತಿಹಾಸವಿದೆ’ ಎಂದು ಗ್ರಾಮದ ನಿವಾಸಿ ಮಂಜುನಾಥ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.