ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿರುವ ಕಟ್ಟಡಗಳ ಸಮೀಕ್ಷೆ ಮಾಡಿ, ವರದಿ ನೀಡಲು ವಲಯ ಮಟ್ಟದ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಹಿಂದೇಟು ಹಾಕುತ್ತಿದ್ದಾರೆ.
ನಕ್ಷೆ ಮಂಜೂರಾತಿ ಇಲ್ಲದೆ ಅನಧಿಕೃತವಾಗಿ ಹಾಗೂ ನಕ್ಷೆ ಉಲ್ಲಂಘಿಸಿ ಅಕ್ರಮವಾಗಿ ನಿರ್ಮಿಸಲಾಗುತ್ತಿರುವ ಕಟ್ಟಡಗಳ ಸಮೀಕ್ಷೆ ನಡೆಸಿ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲ ವಲಯ ಆಯುಕ್ತರಿಗೆ ಅಕ್ಟೋಬರ್ 25ರಂದು ಆದೇಶಿಸಿದ್ದರು.
‘ಆ್ಯಪ್ ಬಳಸಿಕೊಂಡು ಕಟ್ಟಡಗಳ ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿ ದಾಖಲಿಸಲು ಸೂಚಿಸಲಾಗಿತ್ತು. ಖಾಸಗಿ ಏಜೆನ್ಸಿಯಿಂದ 70 ಸಿಬ್ಬಂದಿಯನ್ನು ನೇಮಿಸಿಕೊಂಡು ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಮಹದೇವಪುರ ಮತ್ತು ಪಶ್ಚಿಮ ವಲಯದಿಂದ ವರದಿ ಬಂದಿದ್ದು, ಉಳಿದ ವಲಯಗಳಿಂದ ಅಕ್ಟೋಬರ್ 4ರ ಸಂಜೆ ವೇಳೆಗೆ ಪಟ್ಟಿ ಲಭ್ಯವಾಗಲಿದೆ’ ಎಂದು ತುಷಾರ್ ಗಿರಿನಾಥ್ ಅವರೇ ಸುದ್ದಿಗಾರರಿಗೆ ತಿಳಿಸಿದ್ದರು.
‘ಮುಖ್ಯ ಆಯುಕ್ತರು ನೀಡಿರುವ ಮಾಹಿತಿಗಿಂತ ವಾಸ್ತವಾಂಶ ಭಿನ್ನವಾಗಿದೆ. ವಲಯಗಳಲ್ಲಿ ಅಕ್ರಮ ಕಟ್ಟಡಗಳ ಪಟ್ಟಿ ಇನ್ನೂ ಸಿದ್ಧವಾಗಿಲ್ಲ. ಸ್ಥಳೀಯ ಎಂಜಿನಿಯರ್‌ಗಳು ಅನಧಿಕೃತ ಕಟ್ಟಡಗಳನ್ನು ಗುರುತಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ, ಈ ಪ್ರಕ್ರಿಯೆ ಇನ್ನೂ ಪ್ರಾರಂಭಿಕ ಹಂತದಲ್ಲಿಯೇ ಇದೆ. ಹಲವು ವರ್ಷಗಳ ಹಿಂದೆ ಕೆಲವು ಕಟ್ಟಡಗಳಿಗೆ ನೀಡಲಾಗಿದ್ದ ಅಂತಿಮ ನೋಟಿಸ್ ಅನ್ನು ಇದೀಗ ಕಾರ್ಯಗತಗೊಳಿಸಲಾಗುತ್ತಿದೆ ಅಷ್ಟೇ’ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
‘ಎಂತಹದ್ದೇ ಆ್ಯಪ್ ತಯಾರಿಸಿದ್ದರೂ ಅದರಲ್ಲಿ ಸ್ಥಳೀಯ ಎಂಜಿನಿಯರ್‌ಗಳು ಮಾಹಿತಿ ದಾಖಲಿಸಬೇಕು. ಆ ಪ್ರಕ್ರಿಯೆಯೇ ವಿಳಂಬಗತಿಯಲ್ಲಿದೆ. ಅಲ್ಲದೆ, ರಾಜಕೀಯ ಸೇರಿದಂತೆ ಹಲವು ರೀತಿಯ ಒತ್ತಡವೂ ಎಂಜಿನಿಯರ್‌ಗಳ ಮೇಲಿದೆ’ ಎನ್ನುತ್ತವೆ ಈ ಪ್ರಕ್ರಿಯೆಯ ಮಾಹಿತಿಯುಳ್ಳ ಮೂಲಗಳು.
‘ಅಕ್ರಮ ಅಥವಾ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಎಲ್ಲ ಕಟ್ಟಡಗಳ ಮಾಹಿತಿ ಕಿರಿಯ, ಸಹಾಯಕ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ನಗರ ಯೋಜನೆಯ ಜಂಟಿ ನಿರ್ದೇಶಕರಲ್ಲಿ ಇರುತ್ತದೆ. ಅವರಿಗೆ ಬೇಕಾದಾಗ ನೋಟಿಸ್ ನೀಡಿ, ಸುಮ್ಮನಾಗುತ್ತಾರೆ. ಹಲವು ತಿಂಗಳಾದರೂ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ, ಅಕ್ರಮ ಕಟ್ಟಡಗಳ ನಿರ್ಮಾಣ ಪೂರ್ಣಗೊಳ್ಳುತ್ತದೆ. ಯಾವುದಾದರೂ ಕಟ್ಟಡ ದುರಂತ ಸಂಭವಿಸಿದಾಗ ಮಾತ್ರ ‘ಅಕ್ರಮ ಕಟ್ಟಡಗಳ ತೆರವು’ ಎಂಬ ಮಾತು ಹೆಚ್ಚಾಗುತ್ತದೆ’ ಎಂದು ನಗರ ಯೋಜನೆ ವಿಭಾಗದ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.