ಬೆಂಗಳೂರು: ‘ಹೆಸರಘಟ್ಟ ಹುಲ್ಲುಗಾವಲು ಪ್ರದೇಶಕ್ಕೆ ಸಂಬಂಧಿಸಿದಂತೆ ಸುಳ್ಳು ಮತ್ತು ಅವೈಜ್ಞಾನಿಕ ದಾಖಲೆ ನೀಡಿ ಸರ್ಕಾರದ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿ ಕೆಲವು ರೈತರು ಮತ್ತು ಗ್ರಾಮಸ್ಥರು ಹೆಸರುಘಟ್ಟದ ಪರಿಸರವಾದಿ ಮಹೇಶ್ ಭಟ್ ಮನೆಗೆ ನುಗ್ಗಿ ಪ್ರತಿಭಟನೆ ನಡೆಸಿದರು.
‘ಗ್ರಾಮಸ್ಥರು ಮತ್ತು ಸಾರ್ವಜನಿಕರೊಂದಿಗೆ ಯಾವುದೇ ಚರ್ಚೆ ನಡೆಸದೇ, ಅವರೇ ವರದಿ ಸಿದ್ಧಪಡಿಸಿ ಹೆಸರಘಟ್ಟ ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದರಿಂದಾಗಿ ಹೆಸರಘಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ದಿನನಿತ್ಯದ ಬದುಕು ಅಸ್ಥವ್ಯಸ್ತವಾಗುತ್ತದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ಮಹೇಶ್ ಅವರು ಒಂದು ಎಕರೆ ಜಾಗವನ್ನು ಖರೀದಿಸಿ ಅದಕ್ಕೆ ಹೊಂದಿಕೊಂಡಿರುವ 3 ಎಕರೆಗೂ ಅಧಿಕ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಬೇಲಿ ಹಾಕಿದ್ದಾರೆ. ಅಲ್ಲದೇ, ಅವರು ತೋಟದಲ್ಲಿ ಯಾವುದೇ ಅನುಮತಿ ಪಡೆಯದೇ ಮನೆಯನ್ನು ನಿರ್ಮಾಣ ಮಾಡುವ ಮೂಲಕ ಪರಿಸರ ವಿರೋಧಿಯಾಗಿದ್ದಾರೆ’ ಎಂದು ದೂರಿದರು.
‘ಹುಲ್ಲುಗಾವಲು ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲಿ. ನಾವೆಲ್ಲಾ ರೈತರು ಮತ್ತು ಗ್ರಾಮಸ್ಥರು ಸೇರಿ ಈ ಹುಲ್ಲುಗಾವಲು ಪ್ರದೇಶವನ್ನು ರಕ್ಷಿಸುವ ಕೆಲಸ ಮಾಡುತ್ತೇವೆ’ ಎಂದು ರೈತರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.