ADVERTISEMENT

14 ಹಳ್ಳಿಗಳಿಗೆ ಹೈಟೆಕ್‌ ಒಳಚರಂಡಿ ವ್ಯವಸ್ಥೆ

₹51 ಕೋಟಿ ವೆಚ್ಚ; ನಾಡಪ್ರಭು ಕೆಂಪೇಗೌಡ ಬಿಡಿಎ ಬಡಾವಣೆ ಸುತ್ತಮುತ್ತಲಿನ ಗ್ರಾಮಗಳಿಗೆ ಸೌಲಭ್ಯ

ಆರ್. ಮಂಜುನಾಥ್
Published 26 ಫೆಬ್ರುವರಿ 2024, 23:30 IST
Last Updated 26 ಫೆಬ್ರುವರಿ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ (ಎನ್‌ಪಿಕೆಎಲ್‌) ಸುತ್ತಮುತ್ತಲಿನ ಗ್ರಾಮಗಳ ನಾಗರಿಕರ ಬಹುವರ್ಷಗಳಿಂದ ಬೇಡಿಕೆಗೆ ಬಿಡಿಎ ಇದೀಗ ಸ್ಪಂದಿಸಿದ್ದು, ಈ ಹಳ್ಳಿಗಳಲ್ಲಿ ಹೈಟೆಕ್‌ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

ಸಾಂಪ್ರದಾಯಿಕ ಒಳಚರಂಡಿ ವ್ಯವಸ್ಥೆಯಿಂದ ಹೊರಬಂದಿರುವ ಬಿಡಿಎ, ಮೊದಲ ಬಾರಿಗೆ ‘ಎಚ್‌ಡಿಪಿಇಎಂ’ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ನಿರ್ಮಿಸಲಾಗುವ ಆರ್‌ಸಿಸಿ ಮ್ಯಾನ್‌ಹೋಲ್‌ಗಳಿಗೆ ಬದಲಾಗಿ, ‘ಹೈಡೆನ್ಸಿಟಿ ಪಾಲಿಥೀನ್‌ ಮಷಿನ್‌’ (ಎಚ್‌ಡಿಪಿಇಎಂ) ಅಳವಡಿಸಿಕೊಳ್ಳುತ್ತಿದೆ. ತುಕ್ಕು ಹಿಡಿಯುವ ಸಾಮಾನ್ಯ ಪೈಪುಗಳ ಬದಲಿಗೆ, ದೀರ್ಘಕಾಲ ಬಾಳಿಕೆ ಬರುವ ಡಬಲ್‌‌ವಾಲ್‌ ಕರ‍್ರುಗೇಟೆಡ್‌ (ಡಿಡಬ್ಲ್ಯುಸಿ) ಪೈಪ್‌ಗಳನ್ನು ಬಳಸಲಾಗುತ್ತಿದೆ.

ADVERTISEMENT

ಎನ್‌ಪಿಕೆಎಲ್‌ನಲ್ಲಿ ಡಿಡಬ್ಲ್ಯುಸಿ ಪೈಪ್‌ಗಳನ್ನು ಬಳಸಿ ಪ್ರತಿ ನಿವೇಶನಕ್ಕೂ ಸಂಪರ್ಕವನ್ನು ಒದಗಿಸಲಾಗಿದೆಯಾದರೂ, ಎಚ್‌ಡಿಪಿಇಎಂ ವ್ಯವಸ್ಥೆ ಅಲ್ಲಿಲ್ಲ. ಬಡಾವಣೆ ವ್ಯಾಪ್ತಿಯ ಸುತ್ತಮುತ್ತಲಿನ 14 ಹಳ್ಳಿಗಳಿಗೆ ಎರಡು ಪ್ಯಾಕೇಜ್‌ನಲ್ಲಿ ₹51 ಕೋಟಿ ವೆಚ್ಚದಲ್ಲಿ ಹೊಸ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಟೆಂಡರ್‌ ಪ್ರಕ್ರಿಯೆ ಮುಗಿದು ಮಾರ್ಚ್‌ನಲ್ಲಿ ಕಾರ್ಯಾದೇಶ ನೀಡಿದರೆ, ಮುಂದಿನ ಆರ್ಥಿಕ ವರ್ಷ ಮುಗಿಯುವ ಮುನ್ನ ಹಳ್ಳಗಳಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿ ಮುಗಿಯಲಿದೆ.

‘ಬಿಡಿಎ ಆಯುಕ್ತ ಜಯರಾಮ್‌ ಅವರ ಮಾರ್ಗದರ್ಶನದಂತೆ ಹೊಸ ವ್ಯವಸ್ಥೆಯನ್ನು ಹಳ್ಳಿಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಎನ್‌ಪಿಕೆಎಲ್‌ನಲ್ಲಿ ವೆಚ್ಚವಾಗಿರುವಷ್ಟೇ ಈ ಹೈಟೆಕ್‌ ವ್ಯವಸ್ಥೆಗೂ ವ್ಯಯವಾಗಲಿದೆ. ಹೆಚ್ಚಿನ ಆರ್ಥಿಕ ವೆಚ್ಚವಿಲ್ಲದೆ, ಸಮಸ್ಯೆ ಬಾರದ ಒಳಚರಂಡಿ ಮಾರ್ಗವನ್ನು ರೂಪಿಸಲಾಗುತ್ತಿದೆ’ ಎಂದು ಬಿಡಿಎ ಎಂಜಿನಿಯರ್‌ಗಳು ತಿಳಿಸಿದರು.

ರಸ್ತೆ ಅಗೆಯುವಂತಿಲ್ಲ: ಹೊಸ ಒಳಚರಂಡಿ ವ್ಯವಸ್ಥೆಯಲ್ಲಿ ನಾಗರಿಕರು ಸಂಪರ್ಕ ಪಡೆಯಲು ರಸ್ತೆ ಅಗೆಯುಂವತಿಲ್ಲ. ಬಿಡಿಎ ಮಾರ್ಗ ಅಳವಡಿಸುವ ಸಂದರ್ಭದಲ್ಲಿಯೇ ಪ್ರತಿ ಮನೆಗೂ ಸಂಪರ್ಕ ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲ ಕಾಮಗಾರಿ ಮುಗಿದ ಮೇಲೆ ನಾಗರಿಕರು ಅದಕ್ಕೆ ಮನೆಯ ಒಳಚರಂಡಿ ನೀರಿನ ಸಂಪರ್ಕ ನೀಡಿದರೆ ಸಾಕು ಎಂದು ಬಿಡಿಎ ಎಂಜಿನಿಯರ್‌ಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.