ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಕಾಂಗ್ರೆಸ್ ಹೈಕಮಾಂಡ್‌ನಲ್ಲಿದೆ. ಗೆಲುವಿನ ಅವಕಾಶಗಳಿರುವ ಕ್ಷೇತ್ರಗಳಲ್ಲಿ ಕೈಚೆಲ್ಲದಂತೆ ಎಲ್ಲ ಸಚಿವರಿಗೂ ಸೂಚನೆ ನೀಡಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ದೆಹಲಿಯಲ್ಲಿ ನಡೆದ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆದಿದೆ. ಪ್ರತಿ ಸಚಿವರ ಜತೆಗೂ ಪ್ರತ್ಯೇಕ ಸಭೆ ನಡೆಸಿರುವ ‘ಎಐಸಿಸಿ ಚುನಾವಣಾ ವಾರ್ ರೂಮ್’ ಮುಖ್ಯಸ್ಥ ಸಸಿಕಾಂತ್ ಸೆಂಥಿಲ್ ಅವರು, ಪಕ್ಷದ ಹೈಕಮಾಂಡ್‌ನ ನಿರೀಕ್ಷೆ ಏನು ಎಂಬುದನ್ನು ತಿಳಿಸಿದ್ದಾರೆ’ ಎಂದರು.
ಹಿಂದೆ ಒಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 27 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆ ರೀತಿಯ ಫಲಿತಾಂಶವನ್ನು ಪಕ್ಷದ ವರಿಷ್ಠರು ಬಯಸಿದ್ದಾರೆ. ಗೆಲುವಿನ ಅವಕಾಶವಿರುವ ಕ್ಷೇತ್ರಗಳಲ್ಲಿ ಸೋತರೆ ಉಸ್ತುವಾರಿ ಹೊತ್ತಿರುವ ಸಚಿವರು ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂಬುದಾಗಿ ಭಾವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.
ಅಭ್ಯರ್ಥಿ ಕುರಿತು ಚರ್ಚಿಸಿಲ್ಲ: ‘ಅಭ್ಯರ್ಥಿಗಳ ಆಯ್ಕೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಸಚಿವರ ಸ್ಪರ್ಧೆಯ ಬಗ್ಗೆಯೂ ಯಾವುದೇ ಸೂಚನೆ ನೀಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಸಭೆ ನಡೆಸಿ, ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುತ್ತದೆ. ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ರಾಜ್ಯದಿಂದ ರವಾನೆಯಾಗುವ ಶಿಫಾರಸುಗಳನ್ನು ಪರಿಶೀಲಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.