ADVERTISEMENT

ಹುಳಿಮಾವು ಕೆರೆ ಕೋಡಿ ಅನಾಹುತ 17ರೊಳಗೆ ವರದಿ ಸಲ್ಲಿಸಿ: ಹೈಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 5:56 IST
Last Updated 28 ನವೆಂಬರ್ 2019, 5:56 IST
   

ಬೆಂಗಳೂರು: ‘ಹುಳಿಮಾವು ಕೆರೆ ಏರಿ ಒಡೆದ ಘಟನೆಗೆ ನಿಖರ ಕಾರಣ ಪತ್ತೆ ಹಚ್ಚಲು ಸೂಕ್ತ ತನಿಖೆ ನಡೆಸಿ ಡಿಸೆಂಬರ್ 17ರೊಳಗೆ ವರದಿ ಸಲ್ಲಿಸಿ’ ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.

ನಗರದ ಕೆರೆಗಳ ಸಂರಕ್ಷಣೆ ಹಾಗೂ ರಾಜಕಾಲುವೆ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್‌ ಮಧ್ಯಂತರ ಅರ್ಜಿ ಸಲ್ಲಿಸಿ, ‘ಒಂದು ತಿಂಗಳ ಅವಧಿಯಲ್ಲಿ ಮೂರು ಕೆರೆಗಳ ಏರಿ ಒಡೆದಿವೆ. ಇವುಗಳಲ್ಲಿ ಹುಳಿಮಾವು ಕೆರೆ ಏರಿ ಒಡೆದಿರುವ ಪರಿಣಾಮ ಜನಜೀವನಕ್ಕೆ ಸಾಕಷ್ಟು ತೊಂದರೆ ಆಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಹುಳಿಮಾವು ಕೆರೆ ಏರಿ ಒಡೆದ ವಿಷಯದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತ ತಮ್ಮ ಜವಾಬ್ದಾರಿಯಿಂದ ನುಣುಚಿ
ಕೊಳ್ಳುತ್ತಿವೆ’ ಎಂದು ಅತೃಪ್ತಿ
ವ್ಯಕ್ತಪಡಿಸಿತು.

‘ಘಟನೆಗೆ ಕಾರಣವೇನೆಂದು ಪತ್ತೆಹಚ್ಚಲು ಸೂಕ್ತ ತನಿಖೆ ನಡೆಸಬೇಕು. ಬಿಬಿಎಂಪಿ ಹಾಗೂ ಬಿಡಿಎ ಮಧ್ಯೆ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಆಸ್ತಿಪಾಸ್ತಿ ನಷ್ಟಗಳ ವಿವರ, ಇಂಥ ಅನಾಹುತಗಳನ್ನು ತಡೆಯಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕೈಗೊಳ್ಳುವ ಕ್ರಮಗಳೇನು’ ಎಂಬ ಬಗ್ಗೆ ಸಮಗ್ರ ವರದಿಯನ್ನು ಡಿಸೆಂಬರ್‌ 17ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ತಾಕೀತು ಮಾಡಿತು.

ಮತ್ತೊಬ್ಬ ಅರ್ಜಿದಾರರಾದ, ‘ಸಿಟಿಜನ್‌ ಆ್ಯಕ್ಷನ್‌ ಫೋರಂ’ ಪರ ವಾದ ಮಂಡಿಸಿದ ಹಿರಿಯ ವಕೀಲೆ ಜಯ್ನಾ ಕೊಠಾರಿ, ‘ಕೆರೆಗಳ ಬಗ್ಗೆ ದೂರು ನೀಡಲು ಸರ್ಕಾರದ ವೆಬ್‌ಸೈಟ್ ಇದೆ. ಆದರೆ, ಆ ವೆಬ್‌ಸೈಟ್ ಕಾರ್ಯ ನಿರ್ವಹಿಸುತ್ತಿಲ್ಲ. ಕೆರೆಗಳಿಗೆ ಸಂಬಂಧಿಸಿದ‌ ಶುಲ್ಕ ರಹಿತ ಕರೆ ಲೈನುಗಳು ರದ್ದಾಗಿವೆ. ವಾಟ್ಸ್‌‌ ಆ್ಯಪ್ ನಂಬರ್‌ ಕೂಡಾ ಪ್ರತಿಕ್ರಿಯೆ ನೀಡುತ್ತಿಲ್ಲ. ಒತ್ತುವರಿ ಪ್ರದೇಶಗಳನ್ನು ನಮ್ಮ ಸುಪರ್ದಿಗೆ ಪಡೆಯುವ ಕಾರ್ಯಾರಂಭ ಮಾಡಿದ್ದೇವೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಬಿಬಿಎಂಪಿ ಪಾಲಿಸಿಲ್ಲ’ ಎಂದು ಆಕ್ಷೇಪಿಸಿದರು.

19 ಕೆರೆಗಳ ಕಣ್ಮರೆ ವಿಷಯಕ್ಕೆ ಸಂಬಂಧಿಸಿದಂತೆ ‘ನೀರಿ‘ ವರದಿಯಲ್ಲಿ ಕಾಣಿಸಲಾಗಿದ್ದ,ಸಾಣೆಗುರುವನಹಳ್ಳಿ
ಕೆರೆ ಪ್ರದೇಶದ ಕುರಿತಂತೆ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲ ಗುರುರಾಜ ಜೋಶಿ ಮೆಮೊ ಸಲ್ಲಿಸಿದರು.

‘15 ಎಕರೆ 24 ಗುಂಟೆ ವ್ಯಾಪ್ತಿಯ ಸಾಣೆಗುರುವನಹಳ್ಳಿ ಕೆರೆಯ 4 ಎಕರೆ ಜಾಗದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಿದೆ’ ಎಂಬ ಅಂಶಕ್ಕೆ ನ್ಯಾಯಪೀಠ, ‘ನೀವು ಕಚೇರಿಗೆ ಪಡೆದಿರುವ ಜಮೀನನ್ನು ತಿರಸ್ಕರಿಸಿ ಬೇರೆ ಜಮೀನು ಪಡೆದುಕೊಳ್ಳಿ. ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ. ಆಗ ಎಲ್ಲರೂ ನಿಮ್ಮನ್ನು ಅನುಸರಿಸುತ್ತಾರೆ’ ಎಂದು ಜೋಶಿ ಅವರಿಗೆ ಸಲಹೆ ನೀಡಿದರು.

ಇದಕ್ಕೆ ಜೋಶಿ, ‘ಹೈಕೋರ್ಟ್ 1997ರಲ್ಲಿ ನೀಡಿರುವ ಆದೇಶದಂತೆ ಅಂತಹ ನಿರ್ಮಾಣಗಳನ್ನು ತೆರವುಗೊಳಿಸುವಂತಿಲ್ಲ’ ಎಂದು ತಿಳಿಸಿದರು.

ಅಸಮಾಧಾನ: ‘ಬಿಬಿಎಂಪಿ ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ಕೆರೆ ಜಾಗ ಒತ್ತುವರಿ ಮಾಡಿರುವುದು ಕಂಡು ಬಂದಿದೆ. ಈ ಹಿಂದೆ ನೀಡಿದ್ದ ಹಲವಾರು ಆದೇಶಗಳನ್ನು ಬಿಬಿಎಂಪಿ ಹಾಗೂ ಸರ್ಕಾರ ಪಾಲಿಸಿಲ್ಲ. ಯಾಕೆ ಪಾಲಿಸಿಲ್ಲ ಎಂಬುದಕ್ಕೆ ಉತ್ತರವನ್ನೂ ನೀಡಿಲ್ಲ. ಕೆರೆಗಳ‌ ಸಂರಕ್ಷಣೆಗಾಗಿ ರೂಪಿಸಿದ್ದ ಸಮಿತಿಯ ಕಾರ್ಯವೈಖರಿಯೂ ಸಮಾಧಾನಕರವಾಗಿಲ್ಲ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

‘ಸಮಿತಿ 2019ರ ಜನವರಿ 1ರಿಂದ ಈತನಕ ಒಂದೇ ಒಂದು ಬಾರಿ ಸಭೆ ನಡೆಸಿದೆ. ಜಿಲ್ಲಾ ಮಟ್ಟದಲ್ಲಿ ಒಂದೂ ಸಭೆ ನಡೆದಿಲ್ಲ. ಆದ್ದರಿಂದ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಾರದು‌’ ಎಂದು ಪ್ರಶ್ನಿಸಿತು.‌

ಪ್ರವಾಹದಿಂದ ₹ 29 ಕೋಟಿ ನಷ್ಟ

ಕೆರೆ ದಂಡೆ ಒಡೆದು ಸೃಷ್ಟಿಯಾದ ಪ್ರವಾಹದಿಂದ ಒಟ್ಟು ₹ 29 ಕೋಟಿ ಮೌಲ್ಯದ ಸ್ವತ್ತುಗಳು ಹಾನಿಗೊಳಗಾಗಿವೆ
ಎಂದು ಪಾಲಿಕೆ ಅಂದಾಜಿಸಿದೆ.

‘ಸ್ವತ್ತುಗಳು ಹಾನಿಗೊಳಗಾಗಿರುವ 156 ಕುಟುಂಬಗಳಿಗೆ ಈಗಾಗಲೇ ತಲಾ 50 ಸಾವಿರ ಪರಿಹಾರ ವಿತರಣೆ ಮಾಡಲಾಗಿದೆ. ಸಮೀಕ್ಷೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ನಷ್ಟ ಅನುಭವಿಸಿದವರಲ್ಲಿ ಅರ್ಹರೆಲ್ಲರಿಗೂ ಪರಿಹಾರ ಸಿಗಲಿದೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

‘ಹುಳಿಮಾವು ಕೆರೆ 138 ಎಕರೆ ಇದೆ. ಈ ಪೈಕಿ 18 ಎಕರೆ ಒತ್ತುವರಿ ಆಗಿದೆ ಎಂದು ತಿಳಿದುಬಂದಿದೆ. ಒತ್ತುವರಿ ತೆರವುಗೊಳಿಸಲು ಶೀಘ್ರವೇ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

‘ಪಾಲಿಕೆ 47,406 ವಾಣಿಜ್ಯ ಮಳಿಗೆಗಳಿಗೆ ಪರವಾನಗಿ ನೀಡಿದೆ. ಇವುಗಳಲ್ಲಿ22,474 ಮಳಿಗೆಗಳ ನಾಮಫಲಕ ಪರಿಶೀಲಿಸಿದ್ದೇವೆ. 8 ಸಾವಿರ ಮಳಿಗೆಗಳ ನಾಮಫಲಕಗಳಲ್ಲಿ ಮಾತ್ರ ಕನ್ನಡಕ್ಕೆ ಆದ್ಯತೆ ನೀಡಲಾಗಿದೆ. ನಾಮಫಲಕಗಳಲ್ಲಿ ಕನ್ನಡಕ್ಕೆ ಶೇ 60ರಷ್ಟಾದರೂ ಆದ್ಯತೆ ಸಿಗಬೇಕು. ಇದನ್ನು ಪಾಲಿಸದ ವಾಣಿಜ್ಯ ಮಳಿಗೆಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಆಯುಕ್ತರು ಉತ್ತರಿಸಿದರು.

ಇನ್ನೂ 772 ಗುಂಡಿ: ‘ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 772 ಗುಂಡಿಗಳನ್ನು ಮುಚ್ಚಲು ಬಾಕಿ ಇದೆ. ಹೊರವಲಯಗಳ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ‌. ಈ ರಸ್ತೆಗಳನ್ನು ಆದಷ್ಟು ಬೇಗ ದುರಸ್ತಿ ಪಡಿಸುತ್ತೇವೆ’ ಎಂದು ಆಯುಕ್ತರು ಮಾಹಿತಿ ನೀಡಿದರು.

&&&

‘ಕೆರೆ ಕೋಡಿ ಒಡೆದು ದುರಂತ ಸಂಭವಿಸಿದ್ದು ಬಿಬಿಎಂಪಿಯ ಅಸಡ್ಡೆಯಿಂದ. ಹಾಗಾಗಿ ನಷ್ಟಕ್ಕೊಳಗಾದ ಪ್ರತಿ ಮನೆಯ ಮಾಲೀಕರಿಗೂ ಪರಿಹಾರ ನೀಡಬೇಕು. ಸಂತ್ರಸ್ತರಿಗೆ ಬಿಬಿಎಂಪಿಯಿಂದ ₹ 50 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ₹ 50 ಸಾವಿರ ಪರಿಹಾರ ನೀಡಬೇಕು’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಆಗ್ರಹಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘319 ಮನೆಗಳಿಗೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದರು. ಆದರೆ, ಅದರಲ್ಲಿ 156 ಸಂತ್ರಸ್ತ ಕುಟುಂಬಗಳಷ್ಟೇ ಪರಿಹಾರ ಪಡೆಯಲು ಅರ್ಹವಾಗಿವೆ ಎಂದು ಪಾಲಿಕೆ ಹೇಳುತ್ತಿದೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ಎರಡು ತಿಂಗಳಲ್ಲಿ ನಗರದ ಮೂರು ಕೆರೆಗಳ ದಂಡೆ ಒಡೆದು, ಅನಾಹುತ ಸೃಷ್ಟಿಯಾಗಿವೆ. ಹುಳಿಮಾವು ಕೆರೆ ದಂಡೆ ಒಡೆದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ನಗರದಲ್ಲಿ 206 ಕೆರೆಗಳಿದ್ದು, ಈ ಪೈಕಿ 178 ಕೆರೆಗಳು ಪಾಲಿಕೆ ವ್ಯಾಪ್ತಿಯಲ್ಲಿವೆ. ಬಿಡಿಎ 2016ರಲ್ಲೇ 60 ಕೆರೆಗಳನ್ನು ಪಾಲಿಕೆಗೆ ಹಸ್ತಾಂತರಿಸಿದೆ. ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳನ್ನು ಹೊರತುಪಡಿಸಿ ಉಳಿದ ಜಲಕಾಯಗಳ ಅಭಿವೃದ್ಧಿಗೆ ಅಧಿಕಾರಿಗಳು ಗಮನ ಹರಿಸಿಲ್ಲ’ ಎಂದರು.

‘ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದ್ದರೂ ಪಾಲಿಕೆ ಕ್ರಮ ಕೈಗೊಂಡಿಲ್ಲ. ಬಿಲ್ಡರ್‌ಗಳನ್ನು ಸರ್ಕಾರ ರಕ್ಷಿಸುತ್ತಿದೆ’ ಎಂದು ಆರೋಪಿಸಿದರು.

ಚುನಾವಣಾ ಅಕ್ರಮ– ಆಯುಕ್ತರೇ ಹೊಣೆ: ‘ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಅಧಿಕಾರಿಗಳ ಬದಲಾವಣೆ ಮಾಡುವಂತೆ ಚುನಾವಣಾಧಿಕಾರಿಯೂ ಆಗಿರುವ ಆಯುಕ್ತರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.ಈ ಕ್ಷೇತ್ರಗಳಲ್ಲಿ ಅವ್ಯವಹಾರ ನಡೆದರೆ ಅದಕ್ಕೆ ಬಿಬಿಎಂಪಿ ಆಯುಕ್ತರೇ ನೇರ ಹೊಣೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.