ADVERTISEMENT

ಡೆತ್‌ ನೋಟ್‌ನಲ್ಲಿ ಹೆಸರಿದ್ದ ಮಾತ್ರಕ್ಕೆ ಆರೋಪಿಯಲ್ಲ: ಹೈಕೋರ್ಟ್‌

ಬಿ.ಎಸ್.ಷಣ್ಮುಖಪ್ಪ
Published 23 ಜನವರಿ 2020, 23:19 IST
Last Updated 23 ಜನವರಿ 2020, 23:19 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಪತ್ರವೊಂದರಿಂದಲೇ (ಡೆತ್‌ ನೋಟ್‌) ಮೃತ ವ್ಯಕ್ತಿಯೊಬ್ಬ ಹೊರಿಸಿದ ಆರೋಪಗಳ ಆಧಾರದಲ್ಲಿ ಆತನನ್ನು ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಸರ್ಕಾರಿ ನೌಕರರೊಬ್ಬರ ವಿರುದ್ಧ ಹೊರಿಸಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ರದ್ದುಗೊಳಿಸಿದೆ.

ಆತ್ಮಹತ್ಯೆಗೂ ಮುನ್ನ ಪತ್ನಿ ಬರೆದಿಟ್ಟ ಪತ್ರದ ಆಧಾರದಲ್ಲಿ ಪತಿಯ ವಿರುದ್ಧ ರಾಜ್ಯ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

‘ಮಾನಸಿಕ ಹಿಂಸೆಯ ಕುರಿತು ಪ್ರಾಸಿಕ್ಯೂಷನ್‌ ಕೇವಲ ಊಹಾತ್ಮಕವಾಗಿ ಪ್ರಕರಣವನ್ನು ಹೆಣೆಯಲು ಸಾಧ್ಯವಿಲ್ಲ. ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯ ವಿರುದ್ಧ ನಿರ್ದಿಷ್ಟ ಮತ್ತು ನಿಖರ ಆರೋಪಗಳು ಇರಬೇಕು. ವೈವಾಹಿಕ ಜೀವನದಲ್ಲಿ ಪತಿ ನೀಡುವ ಕಿರುಕುಳದ ಸ್ವರೂಪವನ್ನು ಸ್ಪಷ್ಟವಾಗಿ ತಿಳಿಸದೇ ಕೇವಲ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟರೆ ಅದನ್ನೇ ಬಲವಾದ ಸಾಕ್ಷ್ಯ ಎಂದು ತೀರ್ಮಾನಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.

ADVERTISEMENT

ಏನಿದು ಪ್ರಕರಣ?: ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ನೌಕರರರಾಗಿದ್ದ 28 ವರ್ಷದ ವ್ಯಕ್ತಿ 2014ರ ಫೆಬ್ರುವರಿ 2ರಂದು 24 ವರ್ಷದ ಯುವತಿಯನ್ನು ಮದುವೆಯಾಗಿದ್ದರು. ಮದುವೆಯಾದ ನಾಲ್ಕು ತಿಂಗಳಿಗೇ ಅಂದರೆ, 2014ರ ಜೂನ್‌ 26ರಂದು ಆಕೆ ತನ್ನ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹ‌ತ್ಯೆಗೆ ಶರಣಾಗುವ ಮುನ್ನ ಡೆತ್‌ ನೋಟ್‌ ಬರೆದಿಟ್ಟಿದ್ದ ಮಹಿಳೆ, ‘ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಈ ವಿಷಯ ಯಾರಿಗೂ ಗೊತ್ತಿಲ್ಲ. ಹೆಚ್ಚೆಂದರೆ ಇನ್ನೊಂದು ಮುರ್ನಾಲ್ಕು ತಿಂಗಳು ಬದುಕಬಹುದು. ಆದರೆ, ನನ್ನ ಸಾವಿಗೆ ನನ್ನ ಗಂಡನೇ ಕಾರಣ ಎಂದು ಪೊಲೀಸರಿಗೆ ತಿಳಿಸಬೇಕು’ ಎಂದು ಕಾಣಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕೆ.ಬಿ.ಕೆ ಸ್ವಾಮಿ, ‘ಆಕೆಯ ಸಾವಿಗೆ ಕ್ಯಾನ್ಸರ್‌ ಕಾರಣವಾಗಿರಬಹುದು.ಆದ್ದರಿಂದ ಎರಡು ವೈರುಧ್ಯದ ಅಂಶಗಳಿದ್ದಾಗ, ಆರೋಪಿಗೆ ಸಹಕಾರಿಯೆನಿಸುವ ಅಂಶವನ್ನು ಪರಿಗಣಿಸಬೇಕಾಗುತ್ತದೆ’ ಎಂದು ವಾದ ಮಂಡಿಸಿದ್ದರು. ಈ ಅಂಶವನ್ನು ನ್ಯಾಯಪೀಠ ‍ಪುರಸ್ಕರಿಸಿದೆ.

ಚಿತ್ರದುರ್ಗ ಕೋಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ಅಲ್ಲಿನ ಸೆಷನ್ಸ್‌ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಆರೋಪಿಯ ವಿರುದ್ಧ ದೋಷಾರೋಪ ಹೊರಿಸದಂತೆ ಪೊಲೀಸರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆರೋಪಿ ಪರ ವಕೀಲ ಕಿರಣ್‌ ಯಾದವ್‌ ವಕಾಲತ್ತು ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.