ADVERTISEMENT

ಗಾಂಧಿ ಬಜಾರ್‌ ರಸ್ತೆ ಅಗಲಕ್ಕೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 11 ಮೇ 2023, 20:06 IST
Last Updated 11 ಮೇ 2023, 20:06 IST
ನಗರದ ಗಾಂಧಿ ಬಜಾರ್‌ನ ಮುಖ್ಯ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದು
ನಗರದ ಗಾಂಧಿ ಬಜಾರ್‌ನ ಮುಖ್ಯ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದು    

ಬೆಂಗಳೂರು: ನಗರದ ಬಸವನಗುಡಿಯ ಗಾಂಧಿ ಬಜಾರ್ ರಸ್ತೆ ನವೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಪಾದಚಾರಿ ಮಾರ್ಗವನ್ನು 40 ಅಡಿ ಅಗಲಕ್ಕೆ ವಿಸ್ತರಿಸುವ ಕಾರ್ಯಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.

ಈ ಸಂಬಂಧ ಗಾಂಧಿ ಬಜಾರ್‌ನ ಅಂಗಡಿ ಮಳಿಗೆ ಮಾಲೀಕ ಎಲ್.ಗುಂಡುರಾವ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ರಜಾಕಾಲದ ಏಕಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಗುರುವಾರ ವಿಚಾರಣೆ ನಡೆಸಿ ಮಧ್ಯಂತರ ಆದೇಶ ನೀಡಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್, ’ನವೀಕರಣದ ನೆಪದಲ್ಲಿ ಬಿಬಿಎಂಪಿ ಮುಖ್ಯ ರಸ್ತೆಯನ್ನು ಕಿರಿದು ಮಾಡಿ ಪಾದಚಾರಿ ಮಾರ್ಗವನ್ನು ಅಗಲಗೊಳಿಸುತ್ತಿದೆ. 800 ಮೀಟರ್ ಉದ್ದದ ಈ ಮಾರ್ಗದಲ್ಲಿ ಮೊದಲು 100 ಅಡಿ ಅಗಲದ ರಸ್ತೆ ಇತ್ತು. ಈಗ ಅದನ್ನು 23 ಅಡಿಗೆ ಇಳಿಸಿ ಪಾದಚಾರಿ ಮಾರ್ಗವನ್ನು ಒಂದು ಕಡೆ 40 ಅಡಿಗೆ ಹಾಗೂ ಮತ್ತೊಂದು ಕಡೆ 35 ಅಡಿಗೆ ಅಗಲ ಮಾಡಲಾಗುತ್ತಿದೆ’ ಎಂದು ಆಕ್ಷೇಪಿಸಿದರು.

ADVERTISEMENT

’ಇದರಿಂದ ಮುಖ್ಯ ರಸ್ತೆ ತೀರಾ ಕಿರಿದಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಲಾಗುತ್ತದೆ. ಇದರಿಂದ ಈಗಾಗಲೇ ಇರುವ ಅಂಗಡಿ ಮಳಿಗೆಗಳಿಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಲಿದೆ. ಪಾಲಿಕೆಯ ಈ ಕಾಮಗಾರಿ, ಭಾರತೀಯ ರಸ್ತೆ ಕಾಂಗ್ರೆಸ್‌ ನಿಯಮಗಳಿಗೆ ವಿರುದ್ಧವಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಸ್ಥಳಾವಕಾಶವೇ ಇರುವುದಿಲ್ಲ. ಆದ್ದರಿಂದ, ಪಾದಚಾರಿ ಮಾರ್ಗ ಅಗಲ ಮಾಡದಂತೆ ಮಧ್ಯಂತರ ಆದೇಶ ನೀಡಬೇಕು’ ಎಂದು ಕೋರಿದರು.

ಪಾಲಿಕೆಯ ಕಾರ್ಯ ವೈಖರಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಚೆನ್ನಾಗಿರುವ ರಸ್ತೆಯನ್ನೆಲ್ಲಾ ಅಧ್ವಾನ ಮಾಡಿಟ್ಟಿದ್ದೀರಿ, ಮರಗಳನ್ನು ಕತ್ತರಿಸಿದ್ದೀರಿ, ಜನರು ಅಲ್ಲಿ ಹೇಗೆ ಓಡಾಡಬೇಕು...? ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾರ್ವಜನಿಕರಿಗೆ ಯಾಕೆ ಹೀಗೆ ಅನಗತ್ಯ ತೊಂದರೆ ನೀಡುತ್ತಿದೆ’ ಎಂದು ಬಿಬಿಎಂಪಿಯನ್ನು ಖಾರವಾಗಿ ಪ್ರಶ್ನಿಸಿತು. ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿಗೊಳಿಸಿಸಲು ಆದೇಶಿಸಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.