ಬೆಂಗಳೂರು: ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ, ‘ಚಾಮರಾಜ ಪೇಟೆ ನಾಗರಿಕರ ಒಕ್ಕೂಟ‘ವು ನವೆಂಬರ್ 1 ರಿಂದ ಮೂರು ದಿನ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆಗೆ ಅವಕಾಶ ನಿರಾಕರಿಸಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಿಂಬರಹ ಪ್ರಶ್ನಿಸಿ, ಒಕ್ಕೂಟದ ಅಧ್ಯಕ್ಷ ಶ್ರೀರಾಮೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು, ನ್ಯಾಯಪೀಠಕ್ಕೆ ಮೊಮೊ ಸಲ್ಲಿಸಿ ವಿಷಯವನ್ನು ಪ್ರಸ್ತಾಪಿಸಿದರು. ಮಧ್ಯಾಹ್ನ ವಿವರವಾಗಿ ವಾದ ಆಲಿಸಿದ ನ್ಯಾಯಪೀಠ ಆಚರಣೆಗೆ ಅನುಮತಿ ಕಲ್ಪಿಸಿ ಆದೇಶಿಸಿತು.
ಬೇಸರ: ‘ಇದು ಧಾರ್ಮಿಕ ಕಾರ್ಯಕ್ರಮವಲ್ಲ. ಕರ್ನಾಟಕ ರಚನೆಯಾದ ದಿನ. ಇದನ್ನು ಎಲ್ಲ ಧರ್ಮದವರೂ ಹಬ್ಬದಂತೆ ಆಚರಿಸಬೇಕು. ಇಂತಹ ಕಾರ್ಯಕ್ರಮಗಳಿಗೆ ಸರ್ಕಾರ ಆಕ್ಷೇಪ ವ್ಯಕ್ತಮಾಡಬಾರದು. ಸರ್ಕಾರವೇ ರಾಜ್ಯೋತ್ಸವ ಆಚರಿಸುವಾಗ ಇಲ್ಲಿ ಅನುಮತಿ ನೀಡುವುದಿಲ್ಲ ಎಂದರೆ ಹೇಗೆ’ ಎಂದು ಸರ್ಕಾರದ ನಡೆಗೆ ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.
‘ರಾಜ್ಯೋತ್ಸವವನ್ನು ಎಲ್ಲ ಧರ್ಮದವರು, ಜನಪ್ರತಿನಿಧಿಗಳೂ ಏಕತೆ ಮತ್ತು ಜಾತ್ಯತೀತ ಮನೋಭಾವದಿಂದ ಮೂರು ದಿನ ಆಚರಿಸಬಹುದು. ಆಚರಣೆಯಲ್ಲಿ ಯುವಜನರ ಕೌಶಲ ಮತ್ತು ಪ್ರತಿಭೆಗೆ ಅವಕಾಶ ದೊರೆಯಲಿ‘ ಎಂದು ನ್ಯಾಯಪೀಠ ಆಶಿಸಿತು.
‘ಧಾರ್ಮಿಕ ಭಾವನೆಗಳ ವಿರುದ್ಧ ಹಾಗೂ ಕೋಮುಸೌಹಾರ್ದಕ್ಕೆ ಧಕ್ಕೆಯಾಗುವಂತಹ ಹೇಳಿಕೆ ನೀಡಬಾರದು‘ ಎಂದು ಒಕ್ಕೂಟದ ಮುಖ್ಯಸ್ಥರಿಗೆ ಪೀಠವು ನಿರ್ದೇಶಿಸಿತು.
ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರ ಕೋರಿಕೆಯನ್ನು ಮನ್ನಿಸಿದ ನ್ಯಾಯಪೀಠ, ‘ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಳು ಸುಪ್ರೀಂ ಕೋರ್ಟ್ ಆದೇಶವಿರುವ ಕಾರಣ; ಒಂದು ವೇಳೆ ಕಾನೂನು ಸುವ್ಯವಸ್ಥೆಗೆ ಅಡ್ಡಿ ಅಥವಾ ಕಾನೂನಾತ್ಮಕ ಅಡಚಣೆ ಉಂಟಾದಲ್ಲಿ ಅರ್ಜಿದಾರರಿಗೆ ಪರ್ಯಾಯ ಮೈದಾನ ಒದಗಿಸಬೇಕು‘ ಎಂದು ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ.
‘ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಷ್ಟೇ ಹಮ್ಮಿಕೊಳ್ಳಲಾಗುವುದು. ಧ್ವಜಾರೋಹಣದ ವೇಳೆ ರಾಜ್ಯ ಬಾವುಟವನ್ನು ಮಾತ್ರವೇ ಬಳಕೆ ಮಾಡಲಾಗುವುದು. ಬೇರಾವುದೇ ಬಾವುಟಗಳ ಬಳಕೆಗೆ ಅವಕಾಶ ನೀಡುವುದಿಲ್ಲ‘ ಎಂಬ ಅರ್ಜಿದಾರರ ಪರ ವಕೀಲರ ಮುಚ್ಚಳಿಕೆಯನ್ನು ನ್ಯಾಯಪೀಠ ಇದೇ ವೇಳೆ ದಾಖಲಿಸಿಕೊಂಡಿತು.
ಪ್ರಕರಣವೇನು?: ‘ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನವೆಂಬರ್ 1 ರಿಂದ 3ರವರೆಗೆ ರಾಜ್ಯೋತ್ಸವ, ನಗರ ದೇವತೆ ಅಣ್ಣಮ್ಮ ದೇವಿ ಉತ್ಸವ ಮತ್ತು ಕನ್ನಡ ಸಂಸ್ಕೃತಿಯನ್ನು ಪ್ರಸ್ತುತಪಡಿಸುವ ಸಾಂಸ್ಕೃತಿ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಅನುಮತಿ ನೀಡಬೇಕು‘ ಎಂದು ಕೋರಿ ಒಕ್ಕೂಟವು ಇದೇ 17ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು.
ಮನವಿ ಪರಿಶೀಲಿಸಿದ್ದ ಜಿಲ್ಲಾಧಿಕಾರಿ, ‘ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಿದಲ್ಲಿ ಅದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಲಿದೆ. ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ‘ ಎಂದು ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ಒಕ್ಕೂಟವು ಹೈಕೋರ್ಟ್ ಮೆಟ್ಟಿಲೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.