ADVERTISEMENT

ಕಲಾಪದಿಂದ ದೂರವಿರಲು ವಕೀಲರ ಸಂಘ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 18:33 IST
Last Updated 11 ಫೆಬ್ರುವರಿ 2019, 18:33 IST
ಲೋಗೊ
ಲೋಗೊ   

ಬೆಂಗಳೂರು: ‘ವಕೀಲರ ರಕ್ಷಣೆ ಕಾಯ್ದೆ’ ಜಾರಿಗೆ ತರಲು ಒತ್ತಾಯಿಸಿ ಭಾರತೀಯ ವಕೀಲರ ಪರಿಷತ್ ಇದೇ 12ರಂದು ನಡೆಸಲಿರುವ ರಾಷ್ಟ್ರವ್ಯಾಪಿ ಪ್ರತಿಭಟನೆ ಬೆಂಬಲಿಸಿ ಕೋರ್ಟ್ ಕಲಾಪಗಳಿಂದ ಹೊರಗುಳಿಯಲು ಬೆಂಗಳೂರು ವಕೀಲರ ಸಂಘ ತೀರ್ಮಾನಿಸಿದೆ.

ಈ ಕುರಿತಂತೆ ಸೋಮವಾರ ಎ.ಪಿ.ರಂಗನಾಥ್‌ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

‘ರಾಜ್ಯದ ಎಲ್ಲ ವಕೀಲರ ಸಂಘಗಳೂ ಕಲಾಪದಿಂದ ಹೊರಗುಳಿಯಬೇಕು’ ಎಂದು ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ ಹಾಗೂ ಖಜಾಂಚಿ ಶಿವಮೂರ್ತಿ ಇದೇ ವೇಳೆ ಮನವಿ ಮಾಡಿದರು.

ADVERTISEMENT

‘ಕಲಾಪ ಬಹಿಷ್ಕಾರಕ್ಕೆ ಕರೆಕೊಟ್ಟರೆ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯಾಗುತ್ತದೆ ಎಂಬ ಕಾರಣದಿಂದ ಈ ವಿಷಯದಲ್ಲಿ ರಾಜ್ಯದಾದ್ಯಂತ ಇರುವ 198 ವಕೀಲರ ಸಂಘಗಳು ಸ್ವತಃ ನಿರ್ಧಾರ ಕೈಗೊಳ್ಳಬಹುದಾಗಿದೆ’ ಎಂದು ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷರಾದ ಕೆ.ಬಿ.ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಭಟನೆಯಷ್ಟೇ ನಮ್ಮ ಉದ್ದೇಶ. ಆದಾಗ್ಯೂ ಕಲಾಪದಿಂದ ಹೊರಗುಳಿಯುವ ನಿರ್ಧಾರ ಸ್ಥಳೀಯ ವಕೀಲರ ಸಂಘಗಳ ತೀರ್ಮಾನಕ್ಕೆ ಬಿಟ್ಟದ್ದು’ ಎಂದು ಭಾರತೀಯ ವಕೀಲರ ಪರಿಷತ್‌ ಸಹ ಕಾರ್ಯಾಧ್ಯಕ್ಷ ವೈ.ಆರ್.ಸದಾಶಿವರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.