ಬೆಂಗಳೂರು: ‘ಮೆಜೆಸ್ಟಿಕ್‌ನ ಸುಭೇದಾರ್ ಛತ್ರಂ ರಸ್ತೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ನಡುವೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್‌ನ ಆಜುಬಾಜಿನಲ್ಲಿ ವ್ಯಾಪಾರ ನಡೆಸುತ್ತಿದ್ದ ಮಳಿಗೆಗಳನ್ನು ತೆರವುಗೊಳಿಸಲಾಗಿದೆ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟ್‌ಗೆ ತಿಳಿಸಿದೆ.
ಅಕ್ರಮ ಮಳಿಗೆ ತೆರವುಗೊಳಿಸಲು ಕೋರಿ ಸಾಮಾಜಿಕ ಕಾರ್ಯಕರ್ತ ಕನಕಪುರದ ಕಂಚನಹಳ್ಳಿ ರವಿಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಲೇವಾರಿ ಮಾಡಿದೆ.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ತೆರವು ಕುರಿತಂತೆ ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದರು.
ಪತ್ರದಲ್ಲಿ ಏನಿದೆ?: ‘ಹೈಕೋರ್ಟ್ ನಿರ್ದೇಶನದಂತೆ ಬಿಬಿಎಂಪಿ ಸಹಾಯಕ ಎಂಜಿನಿಯರ್ ಎನ್.ಎಸ್. ರೇವಣ್ಣ ಅವರು ಇದೇ ತಿಂಗಳ ಮೊದಲ ವಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 50ಕ್ಕೂ ಹೆಚ್ಚು ವ್ಯಾಪಾರಿಗಳು ಅಂಡರ್‌ಪಾಸ್‌ನಲ್ಲಿ ಅಕ್ರಮವಾಗಿ ಮಳಿಗೆ ನಿರ್ಮಿಸಿದ್ದು ಕಂಡುಬಂದಿತ್ತು. ಅವುಗಳನ್ನು ಉಪ್ಪಾರಪೇಟೆ ಹಾಗೂ ಕಾಟನ್‌ಪೇಟೆ ಠಾಣೆ ಪೊಲೀಸರ ಸಹಾಯದೊಂದಿಗೆ ಆಗಸ್ಟ್ 16ರಂದು ತೆರವುಗೊಳಿಸಲಾಗಿದೆ’ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.
ಗಸ್ತು: ‘ಇನ್ನು ಮುಂದೆ ಅಂಡರ್‌ಪಾಸ್ ಬಳಿ ಪಾಲಿಕೆ ಅಧಿಕಾರಿಗಳು ನಿಯಮಿತವಾಗಿ ಗಸ್ತು ತಿರುಗಲಿದ್ದಾರೆ. ಅಕ್ರಮ ಮಳಿಗೆಗಳು ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳಲಾಗುವುದು’ ಎಂದೂ ವಿವರಿಸಲಾಗಿದೆ.
ಮನವಿ ಏನಿತ್ತು?: ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ನಿತ್ಯವೂ ಲಕ್ಷಾಂತರ ಜನ ಓಡಾಡುತ್ತಾರೆ. ಈ ಅಂಡರ್‌ಪಾಸ್ ಮತ್ತದರ ಪ್ರವೇಶ ದ್ವಾರಗಳನ್ನು ನೂರಾರು ಬೀದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನನುಕೂಲವಾಗಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
‘ಅಕ್ರಮ ಮಳಿಗೆಗಳನ್ನು ತೆರವು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಸಂಬಂಧ ಸರ್ಕಾರ, ಬಿಬಿಎಂಪಿ ಹಾಗೂ ಪೊಲೀಸರಿಗೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.