ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಪತ್ತೆಯಾಗಿದ್ದ ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣದ ಬಗ್ಗೆ ಪೊಲೀಸರು ಸಮರ್ಪಕ ತನಿಖೆ ನಡೆಸಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮೂರು ವಾರಗಳ ಕಾಲಾವಕಾಶ ನೀಡಿದೆ.
ಮುನಿರತ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ನಗರದ ಎನ್. ಆನಂದಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಪ್ರಕರಣ ಸಂಬಂಧ ಜಾಲಹಳ್ಳಿ ಠಾಣಾ ಪೊಲೀಸರು ನಡೆಸಿರುವ ತನಿಖೆಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಪರಿಶೀಲನೆ ನಡೆಸುತ್ತಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗುವುದು. ಅದಕ್ಕಾಗಿ ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಸರ್ಕಾರದ ಪರ ವಕೀಲರು ಕೋರಿದರು.
ಮನವಿ ಪುರಸ್ಕರಿಸಿದ ನ್ಯಾಯಪೀಠ, ಮೂರು ವಾರಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಜ.18ಕ್ಕೆ ಮುಂದೂಡಿತು. ಮುನಿರತ್ನ ವಿರುದ್ಧ ದಾಖಲಿಸಿರುವ ದೂರಿನ ಮೇರೆಗೆ ಜಾಲಹಳ್ಳಿ ಠಾಣೆ ಪೊಲೀಸರು ನಡೆಸಿರುವ ತನಿಖೆ ಪರಿಶೀಲಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಹಾಗೆಯೇ, ತನಿಖೆ ನಡೆಸಬೇಕಿರುವ ಅಂಶಗಳನ್ನು ಗುರುತಿಸಬೇಕು. ಆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿತು.
2018ರ ಚುನಾವಣೆಯಲ್ಲಿ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಿಂದ ಮುನಿರತ್ನ ಸ್ಪರ್ಧಿಸಿದ್ದರು. ಚುನಾವಣೆಗೂ ಮುನ್ನ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಸಾವಿರಾರು ನಕಲಿ ಮತದಾರರ ಗುರುತಿನ ಚೀಟಿಗಳು ಮತ್ತು ಮುನಿರತ್ನ ಸ್ಪರ್ಧಿಸಿದ್ದ ಪಕ್ಷದ ಕರಪತ್ರಗಳು ಪತ್ತೆಯಾಗಿದ್ದವು. ಈ ಸಂಬಂಧ ಚುನಾವಣಾ ಆಯೋಗ ಹಾಗೂ ಸ್ಥಳೀಯ ನಿವಾಸಿ ರಾಕೇಶ್ ಪ್ರತ್ಯೇಕವಾಗಿ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ಸರಿಯಾಗಿ ನಡೆಸಿಲ್ಲ ಎಂದು ಆರೋಪಿಸಿದ್ದ ಅರ್ಜಿದಾರರು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.