ಬೆಂಗಳೂರು: ನಾಗವಾರ- ಗೊಟ್ಟಿಗೆರೆ ಮೆಟ್ರೊ ರೈಲು ಮಾರ್ಗದಲ್ಲಿ 577 ಮರಗಳನ್ನು ಕತ್ತರಿಸಲು, ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಹೈಕೋರ್ಟ್ ಅನುಮತಿ ನೀಡಿದೆ.
ಮರ ಕಡಿಯುವುದನ್ನು ಆಕ್ಷೇಪಿಸಿ ‘ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್’ ಮತ್ತು ಪರಿಸರವಾದಿ ಟಿ.ದತ್ತಾತ್ರೇಯ ದೇವರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ತಜ್ಞರ ಸಮಿತಿ ನೀಡಿರುವ ವರದಿಯಂತೆ ಬಿಎಂಆರ್‌ಸಿಎಲ್ ನವೆಂಬರ್ 26ರಂದು ಸಲ್ಲಿಸಿರುವ ಮೆಮೊ ಅನುಸಾರ 577 ಮರಗಳನ್ನು ಕತ್ತರಿಸಬಹುದು. ಅಂತೆಯೇ 18 ಮರಗಳನ್ನು ಸ್ಥಳಾಂತರ ಮಾಡಬೇಕು. ಕತ್ತರಿಸುವ ಮರಗಳಿಗೆ ಪರ್ಯಾಯವಾಗಿ ತಜ್ಞರ ಸಮಿತಿ ಸೂಚಿಸಿದಂತೆ ಅರಣ್ಯೀಕರಣ ಕೈಗೊಳ್ಳಬೇಕು. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಬೇಕು ಮತ್ತು ಈ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು’ ಎಂದು ನಿಗಮಕ್ಕೆ ಆದೇಶಿಸಿದೆ.
ನಾಗವಾರ-ಗೊಟ್ಟಿಗೆರೆ ಮೆಟ್ರೊ ಮಾರ್ಗದಲ್ಲಿ ಮರಗಳನ್ನು ಕತ್ತರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು, ‘ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ–1976 ಮತ್ತು ಕರ್ನಾಟಕ ಮರ ಸಂರಕ್ಷಣಾ ನಿಯಮ–1977ಕ್ಕೆ ವಿರುದ್ಧವಾಗಿ ಮರಗಳನ್ನು ಕತ್ತರಿಸಲಾಗುತ್ತಿದೆ’ ಎಂದು ದೂರಿದ್ದರು.
ರಸ್ತೆ ವಿಸ್ತರಣೆ– ಮರ ಕಡಿಯಲು ಸಮ್ಮತಿನೆಲಮಂಗಲ ಹಾಗೂ ಆನೇಕಲ್ ವ್ಯಾಪ್ತಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮವು (ಕೆಆರ್‌ಐಡಿಎಲ್) ಅನುಷ್ಠಾನಗೊಳಿಸುತ್ತಿರುವ ರಸ್ತೆ ವಿಸ್ತರಣೆ ಯೋಜನೆಗೆ ಮರಗಳನ್ನು ಕಡಿಯುವುದಕ್ಕೂ ನ್ಯಾಯಪೀಠ ಇದೇ ವೇಳೆ ಅನುಮತಿ ನೀಡಿದೆ.
ರಸ್ತೆ ಅಗಲೀಕರಣಕ್ಕೆ ಅಡ್ಡಲಾಗಿರುವ 27 ಮರಗಳ ಪೈಕಿ 9 ಮರಗಳನ್ನು ಸ್ಥಳಾಂತರಿಸಬೇಕು. ಉಳಿದ 18 ಮರಗಳನ್ನು ಕತ್ತರಿಸಬಹುದು. ಅದಕ್ಕೆ ಪರ್ಯಾಯವಾಗಿ ತಜ್ಞರ ಸಮಿತಿ ಸೂಚಿಸುವಂತೆ ಅರಣ್ಯೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಶೀಘ್ರವೇ ಯೋಜನೆಯನ್ನು ಪೂರ್ಣಗೊಳಿಸಿ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ. ಈ ಆದೇಶದಿಂದಾಗಿ ಕಳೆದ 14 ತಿಂಗಳಲ್ಲಿ ನನೆಗುದಿಗೆ ಬಿದ್ದ ಯೋಜನೆಯನ್ನು ಪುನಃ ಆರಂಭಿಸಲು ಅನುಮತಿ ಸಿಕ್ಕಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.