ADVERTISEMENT

ದುರ್ಗಾ ಪೂಜೆ: ಪೂರ್ವಭಾವಿ ಸಿದ್ಧತೆಗಾಗಿ ಐದು ದಿನಗಳ ಕಾಲಾವಕಾಶ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 16:56 IST
Last Updated 4 ಅಕ್ಟೋಬರ್ 2024, 16:56 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಸಂಪಂಗಿ ರಾಮನಗರದ ಬನ್ನಪ್ಪ ಪಾರ್ಕ್‌ ಆಟದ ಮೈದಾನದಲ್ಲಿ ದುರ್ಗಾ ಪೂಜೆ ಆಚರಣೆಗೆ ಪೂರ್ವಭಾವಿ ಸಿದ್ಧತೆಗಾಗಿ ಐದು ದಿನಗಳ ಕಾಲಾವಕಾಶ ಕೋರಿರುವ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ’ ಎಂದು ಹೈಕೋರ್ಟ್‌ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಆದೇಶಿಸಿದೆ.

‘ನವರಾತ್ರಿ ಉತ್ಸವದ ಪೂಜೆ ನಿಮಿತ್ತ ಪೂರ್ವಭಾವಿ ಸಿದ್ಧತೆಯ ಭಾಗವಾಗಿ ಇದೇ 6ರಿಂದ 8ರವರೆಗೆ ಪೆಂಡಾಲ್‌, ಶಾಮಿಯಾನ ಹಾಕಲು ಬಿಬಿಎಂಪಿಗೆ ನಿರ್ದೇಶಿಬೇಕು’ ಎಂದು ಕೋರಿ, ‘ನವಜಾಗರಣ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿ’ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ರಜಾಕಾಲದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ನೇತೃತ್ವದ  ವಿಭಾಗೀಯ ನ್ಯಾಯಪೀಠವು ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಬ್ರಿಜೇಶ್‌ ಪಾಟೀಲ್‌, ‘ಅರ್ಜಿದಾರರು ಇದೇ 9ರಿಂದ 13ರವರೆಗೆ ಸಾರ್ವಜನಿಕ ನವರಾತ್ರಿ ಉತ್ಸವ ಆಚರಿಸಲಿದ್ದಾರೆ. ಇದರ ಸಿದ್ಧತೆಗಾಗಿ 6ರಿಂದ 8ರವರೆಗೆ ಪೆಂಡಾಲ್‌, ಮಳೆ ರಕ್ಷಣಾ ಶಾಮಿಯಾನ ಹಾಕಲು ಅವಕಾಶ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ಪುರಸ್ಕರಿಸುವಂತೆ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.