ADVERTISEMENT

ಹೈಕೋರ್ಟ್ ಆದೇಶವಿದ್ದರೂ ಈಡೇರದ ಹಂಬಲ- ಮಗನನ್ನು ಕಾಣಲು ತಾಯಿಯ ತಹತಹಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 15:47 IST
Last Updated 10 ಡಿಸೆಂಬರ್ 2021, 15:47 IST
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್   

ಬೆಂಗಳೂರು: ‘ಕೌಟುಂಬಿಕ ಕಲಹದ ಕಾರಣ ತಂದೆಯ ಬಳಿಯೇ ಉಳಿದಿರುವ ನನ್ನ 13 ವರ್ಷದ ಮಗನನ್ನು ನೋಡದೆ ಎರಡೂವರೆ ವರ್ಷಗಳೇ ಉರುಳಿ ಹೋಗಿವೆ. ಆದ್ದರಿಂದ, ಅವನ ಭೇಟಿಗೆ ಅವಕಾಶ ಕಲ್ಪಿಸಿಕೊಡಿ‘ ಎಂದು ಹೈಕೋರ್ಟ್‌ ಮೆಟ್ಟಿಲೇರಿರುವ ತಾಯಿಯ ಹಂಬಲ ಶುಕ್ರವಾರವೂ ಈಡೇರಲಿಲ್ಲ.

ಈ ಸಂಬಂಧ ಬೆಂಗಳೂರಿನ ಸಾಫ್ಟ್‌ವೇರ್‌ ಉದ್ಯೋಗಿ ಮಹಿಳೆಯ ಮೊರೆಗೆ ಗುರುವಾರವಷ್ಟೇ (ಡಿ.09) ಸ್ಪಂದಿಸಿದ್ದ ಹೈಕೋರ್ಟ್‌, ‘ಮಗನನ್ನು ಕೋರ್ಟ್‌ಗೆ ಶುಕ್ರವಾರ ಖುದ್ದು ಹಾಜರುಪಡಿಸಿ’ ಎಂದು ಪ್ರತಿವಾದಿ ತಂದೆಯ ಪರ ವಕೀಲರಿಗೆ ನಿರ್ದೇಶಿಸಿತ್ತು.ಶುಕ್ರವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತು. ತಂದೆಯ ಪರ ಹಾಜರಾಗಿದ್ದ ವಕೀಲರು, ‘ತಂದೆ, ಮಗ ಇಬ್ಬರೂ ಗೋವಾದಲ್ಲಿದ್ದಾರೆ’ ಎಂದು ತಿಳಿಸಿದರು.

ಇದಕ್ಕೆ ನ್ಯಾಯಪೀಠ, ‘ಗೋವಾದಲ್ಲಿ ಎಲ್ಲಿದ್ದಾರೆ’ ಎಂದು ಪ್ರಶ್ನಿಸಿತು. ವಕೀಲರು, ‘ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ, ಒಂದಷ್ಟು ದಿನ ಸಮಯಾವಕಾಶ ನೀಡಿದರೆ ಅವರು ಕೋರ್ಟ್‌ಗೆ ಬರುತ್ತಾರೆ’ ಎಂದು ತಿಳಿಸಿದರು.

ADVERTISEMENT

ಈ ಹೇಳಿಕೆ ನಿಜವೊ ಸುಳ್ಳೋ ಎಂಬುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಪೀಠ, ಪ್ರತಿವಾದಿ ಪತಿಯ ಮೊಬೈಲ್‌ ಫೋನ್‌ ನಂಬರ್‌ ಅನ್ನು ವಕೀಲರಿಂದ ಪಡೆದುಕೊಂಡಿತು. ‘ಬಾಂಬೆ ಹೈಕೋರ್ಟ್‌ನಲ್ಲಿರುವ ಗೋವಾ ಹೈಕೋರ್ಟ್‌ ಪೀಠದ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಪ್ರತಿವಾದಿಯ ಮೊಬೈಲ್‌ ಫೋನ್‌ ನಂಬರ್ ನೀಡಿ, ತಂದೆ ಮತ್ತು ಮಗ ಗೋವಾದಲ್ಲಿ ಇದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ವರದಿ ನೀಡಿ’ ಎಂದು ರಾಜ್ಯ ಹೈಕೋರ್ಟ್‌ ಜನರಲ್ ಅವರಿಗೆ ಸೂಚಿಸಿತು.

ಮಧ್ಯಾಹ್ನದ ವೇಳೆಗೆ ವರದಿ ನೀಡಿದ ಗೋವಾ ಪೀಠದ ರಿಜಿಸ್ಟ್ರಾರ್ ಜನರಲ್, ‘ತಂದೆ ಮಗ ಇಬ್ಬರು ಗೋವಾದಲ್ಲಿಯೇ ಇದ್ದಾರೆ ಎಂಬುದನ್ನುಗೋವಾದ ಡಿಜಿಪಿ ಖಚಿತಪಡಿಸಿದ್ದಾರೆ’ ಎಂಬ ವರದಿ ನೀಡಿತು. ವಿಚಾರಣೆಯನ್ನು ಇದೇ 13ಕ್ಕೆ ಮುಂದೂಡಲಾಗಿದೆ.

ಮಗನ ಭೇಟಿಗೆ ಅವಕಾಶ ಕೋರಿರುವ ಅರ್ಜಿದಾರ ತಾಯಿಗೆ 35 ವರ್ಷ. ಪತಿಗೆ 43 ವರ್ಷ. ಸುಶಿಕ್ಷಿತರಾಗಿರುವ ಇಬ್ಬರೂ ಸದ್ಯ ಬೆಂಗಳೂರಿನ ನಿವಾಸಿಗಳು. ಕೌಟುಂಬಿಕ ಕಲಹದ ಕಾರಣ ಪ್ರತ್ಯೇಕವಾಗಿ ಬೆಂಗಳೂರಿನಲ್ಲಿಯೇ ಬದುಕುತ್ತಿದ್ದಾರೆ. ಇವರಿಬ್ಬರ ದಾಂಪತ್ಯ ಕಲಹದಲ್ಲಿ ತಂದೆಯು ಮಗನನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಕೋರ್ಟ್‌ ನಿರ್ದೇಶನಗಳಿದ್ದರೂ ಮಗನನ್ನು ಭೇಟಿ ಮಾಡಲು ಅವನ ತಾಯಿಗೆ ಅವಕಾಶ ಕೊಟ್ಟಿಲ್ಲ. ಈ ಸಂಬಂಧ ತಾಯಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಗುರುವಾರ ವಿಚಾರಣೆ ವೇಳೆ ಪ್ರತಿವಾದಿ ಪರ ವಕೀಲರು, ‘ಹುಡುಗನಿಗೆ ಪರೀಕ್ಷೆ ಇದೆ. ಕೋರ್ಟ್‌ಗೆ ನಾಳೆಯೇ ಬರಲು ಸಾಧ್ಯವಾಗುವುದಿಲ್ಲ. ಮೂರ್ನಾಲ್ಕು ದಿನ ಸಮಯಾವಕಾಶ ಬೇಕು’ ಎಂದು ಕೋರಿದ್ದರು. ಆದರೆ, ಈ ಹೇಳಿಕೆಯನ್ನು ನಿರಾಕರಿಸಿದ್ದ ನ್ಯಾಯಪೀಠ, ‘ನಿಮ್ಮ ಕಕ್ಷಿದಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಿ, ಬಂಧಿಸಿ ಕರೆತರಲು ಆದೇಶಿಸಬೇಕಾಗುತ್ತದೆ’ ಎಂದು ಎಚ್ಚರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.