ಬೆಂಗಳೂರು: ಬಾಕಿ ತೆರಿಗೆ ಪಾವತಿಸದ ಕಾರಣ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಒಡೆತನದ ರಾಕ್‌ಲೈನ್ ಮಾಲ್‌ಗೆ ಹಾಕಲಾಗಿರುವ ಬೀಗವನ್ನು ತಕ್ಷಣವೇ ತೆರವುಗೊಳಿಸುವಂತೆ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಆದೇಶಿಸಿದೆ.
ಬಿಬಿಎಂಪಿ ಕ್ರಮವನ್ನು ಪ್ರಶ್ನಿಸಿ ರಾಕ್‌ಲೈನ್ ವೆಂಕಟೇಶ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಕ್‌ಲೈನ್ ವೆಂಕಟೇಶ್ ಪರ ಹಿರಿಯ ವಕೀಲ ಎಂ.ಶ್ಯಾಮಸುಂದರ್, ‘ಮಾಲ್ ಅನ್ನು ಲಾಕ್ ಮಾಡಲು ಬಿಬಿಎಂಪಿಯ ಪ್ರತ್ಯೇಕ ಕಾಯ್ದೆಯಲ್ಲಾಗಲೀ ಅಥವಾ ಕೆಎಂಸಿ ಕಾಯ್ದೆಯಲ್ಲಾಗಲೀ ಎಲ್ಲೂ ಅವಕಾಶವಿಲ್ಲ. ಈ ಹಿಂದೆ ಇದೇ ಹೈಕೋರ್ಟ್‌ನ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂತ್ರಿಮಾಲ್ ಪ್ರಕರಣದಲ್ಲಿ ಇದನ್ನು ಸ್ಪಷ್ಟಪಡಿಸಿದೆ. ತೆರಿಗೆ ಸಂಗ್ರಹಿಸಲು ಬಿಬಿಎಂಪಿಗೆ ಪರ್ಯಾಯ ಮಾರ್ಗಗಳಿವೆ. ಆದ್ದರಿಂದ, ರಾಕ್‌ಲೈನ್ ಮಾಲ್ ಬೀಗ ತೆರೆಯಲು ಆದೇಶಿಸಬೇಕು‘ ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಬಿಬಿಎಂಪಿ ಪರ ವಕೀಲರನ್ನು, ’ನೀವೇಕೆ ಈ ಹಿಂದೆ ಇದೇ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿಲ್ಲ‘ ಎಂದು ಪ್ರಶ್ನಿಸಿತಲ್ಲದೆ, ‘ರಾಕ್ ಲೈನ್ ಮಾಲ್‌ಗೆ ಹಾಕಲಾಗಿರುವ ಬೀಗ ತೆರೆಯಿರಿ’ ಎಂದು ಆದೇಶಿಸಿ ಅರ್ಜಿ ವಿಲೇವಾರಿ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.