ADVERTISEMENT

ದ್ವೇಷ ಭಾಷಣ ಆರೋಪ: ಕ್ರಮಕ್ಕೆ ಕೋರಿದ ಪಿಐಎಲ್ ವಜಾ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 14:48 IST
Last Updated 9 ಜುಲೈ 2024, 14:48 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: "ದ್ವೇಷ ಭಾಷಣದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ, ವಿಧಾನಸಭಾ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಸಂಸದ ಪ್ರತಾಪ ಸಿಂಹ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ನಮೋ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ, ಕೆ.ಎಸ್.ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ದೇಶಿಸಬೇಕು" ಎಂದು ಕೋರಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಮೊಹಮ್ಮದ್ ಖಲೀಮುಲ್ಲಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ADVERTISEMENT

“ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ರಾಜಕೀಯ ಮತ್ತು ಕೋಮು ಭಾವನೆಯ ದುರುದ್ದೇಶದಿಂದ ಕೂಡಿದ್ದು, ಇದನ್ನು ಪುರಸ್ಕರಿಸಲಾಗದು. ನ್ಯಾಯವಾಗಿ ಇಂತಹ ಅರ್ಜಿಗೆ ದಂಡ ವಿಧಿಸಿ ವಜಾ ಮಾಡಬೇಕು. ಆದರೆ, ಹಾಗೆ ಮಾಡುತ್ತಿಲ್ಲ” ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ ಅರ್ಜಿ ವಜಾ ಮಾಡಿ ಆದೇಶಿಸಿದೆ.

ವಿಚಾರಣೆ ವೇಳೆ ನ್ಯಾಯಪೀಠವು ಅರ್ಜಿದಾರರ ಪರ ವಕೀಲ ಅನ್ವರ್ ಅವರನ್ನು, "ನಿಮ್ಮ ಅರ್ಜಿದಾರ ಖಲೀಮುಲ್ಲಾ ಅವರ ವೃತ್ತಿ ಏನು" ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಲು ಅನ್ವರ್ ತಡವರಿಸಿದರಲ್ಲದೆ, ವಿಚಾರಣೆ ಮುಂದೂಡುವಂತೆ ಪರಿ ಪರಿಯಾಗಿ ಕೋರಿದರು.

ಅಂತಿಮವಾಗಿ, "ಅರ್ಜಿದಾರ ಖಲೀಮುಲ್ಲಾ ಸಿವಿಲ್ ಎಂಜಿನಿಯರ್ ಮತ್ತು ಸಾಮಾಜಿಕ ಕಾರ್ಯಕರ್ತರೂ ಆಗಿದ್ದಾರೆ" ಎಂದರು.

ದಾಖಲೆಯನ್ನು ಪರಿಶೀಲಿಸಿದ ನ್ಯಾಯಪೀಠ, “ನಿಮ್ಮ ಅರ್ಜಿದಾರರು ಏನು ಮಾಡುತ್ತಿದ್ದಾರೆ ಎಂಬುದೂ ನಿಮಗೆ ತಿಳಿದಿಲ್ಲ ಎಂದರೆ ಯಾಕೆ ಅರ್ಜಿ ಸಲ್ಲಿಸುತ್ತೀರಿ? ಕ್ಷುಲ್ಲಕ ಅರ್ಜಿಗಳನ್ನು ಹೈಕೋರ್ಟ್ ಗೆ ಸಲ್ಲಿಸುವ ಮೂಲಕ ಯಾಕೆ ಈ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತೀರಿ? ಸಿವಿಲ್ ಕಾಂಟ್ರ್ಯಾಕ್ಟರ್ ಇಂತಹ ಅನ್ ಸಿವಿಲ್ ಅರ್ಜಿ ಸಲ್ಲಿಸಿದ್ದಾರೆಯೇ? ಎಂದು ಮೌಖಿಕವಾಗಿ ಕಿಡಿಕಾರಿತು.

ಮನವಿ ಏನಿತ್ತು?: "ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದ್ವೇಷ ಭಾಷಣ ಮಾಡುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಕ್ರಮಕ್ಕೆ ಮುಂದಾಗುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಇಂತಹ ಪ್ರಕರಣಗಳ ವಿಚಾರಣೆ ನಡೆಸಲು ಜಿಲ್ಲಾ ಮಟ್ಟದಲ್ಲಿ ನಿರ್ದಿಷ್ಟ ನ್ಯಾಯಾಲಯವನ್ನು ಗೊತ್ತುಪಡಿಸಲು ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು" ಎಂದು ಅರ್ಜಿದಾರರು ಮನವಿ ಮಾಡಿದ್ದರು.

"ದ್ವೇಷ ಭಾಷಣಗಳು ಸಮಾಜದಲ್ಲಿ, ದೊಂಬಿ ದೌರ್ಜನ್ಯ, ಕೊಲೆಯಂತಹ ಗಂಭೀರ ಪರಿಣಾಮಗಳನ್ನು ಉಂಟು ಮಾಡಲಿವೆ ಎಂಬುದರ ಬಗ್ಗೆ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲು ಸರ್ಕಾರಕ್ಕೆ ಆದೇಶಿಸಿಬೇಕು" ಎಂದು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.