ADVERTISEMENT

ಅವಹೇಳನಕಾರಿ ಪೋಸ್ಟ್‌: ವಕೀಲನ ವಿರುದ್ಧದ ಪ್ರಕರಣ ರದ್ದತಿಗೆ ನಕಾರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 22:19 IST
Last Updated 12 ನವೆಂಬರ್ 2024, 22:19 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿ ತೀರ್ಪು ನೀಡಿದ್ದ ಉತ್ತರ ಪ್ರದೇಶದ ಜಿಲ್ಲಾ ನ್ಯಾಯಾಧೀಶರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದಾರೆ’ ಎಂಬ ಆರೋಪದಡಿ ರಾಮನಗರದ ವಕೀಲ ಛನ್‌ ಪಾಷಾ ಐಜೂರು ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

‘ನನ್ನ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ರಾಮನಗರದ ಗೌಸಿಯಾ ನಗರ್ ನಿವಾಸಿಯಾದ ವಕೀಲ ಛನ್‌ ಪಾಷಾ ಐಜೂರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ‘ಈ ಸಂಬಂಧ ವಿಚಾರಣಾ ನ್ಯಾಯಾಲಯದ ಮುಂದೆಯೇ ನಿಮ್ಮ ಅರ್ಜಿ ಸಲ್ಲಿಸಿ’ ಎಂದು ಅರ್ಜಿದಾರರ ಪರ ವಕೀಲರಿಗೆ ತಾಕೀತು ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಛನ್‌ ಪಾಷಾ ರಾಮನಗರದಲ್ಲಿ ವಕೀಲಿಕೆ ನಡೆಸುತ್ತಿದ್ದು, ಅವರ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಲಾಗಿದೆ. ಈ ಬಗ್ಗೆ ಅವರು  ಪೊಲೀಸರಿಗೆ ದೂರು ನೀಡಿದ್ದಾರೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

ಅರ್ಜಿ ಪರಿಶೀಲಿಸಿ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಯಾವುದೇ ಹೇಳಿಕೆ ನೀಡುವುದಕ್ಕೂ ಒಂದು ಇತಿ-ಮಿತಿ ಇರುತ್ತದೆ. ಪೋಸ್ಟ್‌ನಲ್ಲಿ ಭಯಾನಕ ಪದಗಳನ್ನು ಬಳಸಲಾಗಿದೆ.  ನಿಜವಾಗಿಯೂ ಇದೊಂದು ದುರ್ವರ್ತನೆ. ಹಾಗಾಗಿ, ನಾನು ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಬೇಕಿದ್ದರೆ ನೀವು ವಿಚಾರಣಾ ನ್ಯಾಯಾಲಯದ ಮುಂದೆಯೇ ಆರೋಪಗಳನ್ನು ಕೈ ಬಿಡುವಂತೆ ಕೋರಿ ಅರ್ಜಿ ಹಾಕಿಕೊಳ್ಳಿ‘ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.

ಪ್ರಕರಣವೇನು?: ‘ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿರುವ ಉತ್ತರ ಪ್ರದೇಶದ ವಾರಾಣಸಿ ಜಿಲ್ಲಾ ನ್ಯಾಯಾಧೀಶರು ಸೇವೆಯಿಂದ ನಿವೃತ್ತರಾಗುವ ಒಂದು ದಿನ ಮೊದಲು ಈ ತೀರ್ಪು ನೀಡಿದ್ದಾರೆ. ಬಿಜೆಪಿಯ ಎಂಜಲು ಕಾಸಿಗೆ ತಟ್ಟೆ ಹಿಡಿಯುವವರು’ ಎಂದೆಲ್ಲ ಬರೆದಿದ್ದ ಪೋಸ್ಟ್‌ನಲ್ಲಿ  ‘ನ್ಯಾಯಾಧೀಶನಿಗೆ ಧಿಕ್ಕಾರವಿರಲಿ ಎಂದು ಪೋಸ್ಟ್‌ ಹಾಕಿದ್ದಾರೆ’ ಎಂದು ಆರೋಪಿಸಿ ಪಿ.ಶಿವಾನಂದ ರಾಮನಗರ ಟೌನ್‌ ಪೊಲೀಸ್‌ ಠಾಣೆಗೆ 2024ರ ಫೆಬ್ರುವರಿ 3ರಂದು ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.