ADVERTISEMENT

ತರಬೇತಿ ಅವಧಿಯ ಸಿಬ್ಬಂದಿ ನೌಕರ ಅಲ್ಲ: ಹೈಕೋರ್ಟ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 22:30 IST
Last Updated 25 ಆಗಸ್ಟ್ 2021, 22:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು:ಕೈಗಾರಿಕಾ ಕಾಯ್ದೆ ಪ್ರಕಾರ ಯಾವುದೇ ಸಂಸ್ಥೆಯ ತರಬೇತಿ ಅವಧಿಯ ಸಿಬ್ಬಂದಿಯನ್ನು ಕಾಯಂ ನೌಕರ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ತರಬೇತಿ ಅವಧಿಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದ ಸಿಬ್ಬಂದಿಯನ್ನು ವಜಾಗೊಳಿಸಿದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ಪೀಠ, ಈ ಅಭಿಪ್ರಾಯಪಟ್ಟಿತು.

14 ಪ್ರಯಾಣಿಕರಿಗೆ ಟಿಕೆಟ್ ನೀಡದಿರುವ ಆರೋಪದ ಮೇಲೆ ತರಬೇತಿ ಅವಧಿ ಸಿಬ್ಬಂದಿಯೊಬ್ಬರನ್ನು 2001ರಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವಜಾಗೊಳಿಸಿತ್ತು. ಬಾಕಿ ವೇತನದ ಜೊತೆಗೆ ಅವರನ್ನು ಸೇವೆಗೆ ಮರಳಿ ಸೇರಿಸಿಕೊಳ್ಳಲು ಕಾರ್ಮಿಕ ನ್ಯಾಯಾಲಯ ಆದೇಶಿಸಿತ್ತು. ಆದರೆ, ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ಹೈಕೋರ್ಟ್‌ ಏಕ ಸದಸ್ಯ ಪೀಠ ಎತ್ತಿ ಹಿಡಿದಿತ್ತು.

ADVERTISEMENT

‘ವಜಾಗೊಳಿಸುವ ಸಂದರ್ಭದಲ್ಲಿ 240 ದಿನಗಳನ್ನು ಪೂರೈಸಿದ್ದರೂ ತರಬೇತಿ ಅವಧಿಯ ಸಿಬ್ಬಂದಿ ಎಂದೇ ಹೇಳಲಾಗುತ್ತಿದೆ. ಕಾಯಂ ನೌಕರ ಎಂದು ಪರಿಗಣಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು. ಪ್ರಯಾಣಿಕರಿಗೆ ಟಿಕೆಟ್ ವಿತರಿಸದ ಇದೇ ರೀತಿಯ 32 ಪ್ರಕರಣಗಳು ಅರ್ಜಿದಾರರ ವಿರುದ್ಧ ದಾಖಲಾಗಿವೆ ಎಂದು ನಿಗಮ ಆಕ್ಷೇಪ ಸಲ್ಲಿಸಿತ್ತು.

‘ಮೊದಲಿಗೆ ತರಬೇತಿ ಅವಧಿಯ ಅವಕಾಶ ನೀಡಿ ಕೆಲವು ಷರತ್ತುಗಳನ್ನು ವಿಧಿಸಲಾಗುತ್ತದೆ. ತರಬೇತಿ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದರೆ ಮಾತ್ರ ಅವರನ್ನು ಕಾಯಂ ನೌಕರ ಎಂದು ಪರಿಗಣಿಸಲಾಗುತ್ತದೆ. ಅಲ್ಲಿಯ ತನಕ ಅವರು ಕಾಯಂ ನೌಕರ ಆಗುವುದಿಲ್ಲ’ ಎಂದು ಪೀಠ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.