ADVERTISEMENT

ಶಾಸಕ ಮುನಿರತ್ನಗೆ ಹೈಕೋರ್ಟ್‌ ಸಮನ್ಸ್‌

ಚುನಾವಣಾ ತಕರಾರು ಅರ್ಜಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2018, 19:19 IST
Last Updated 28 ಆಗಸ್ಟ್ 2018, 19:19 IST

ಬೆಂಗಳೂರು: ಚುನಾವಣೆ ವೇಳೆ ಅಕ್ರಮ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರಿಗೆ ಸಮನ್ಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಪರಾಜಿತ ಅಭ್ಯರ್ಥಿ ಬಿಜೆಪಿಯ ಪಿ.ಎಂ.ಮುನಿರಾಜು ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಹುಚ್ಚ ವೆಂಕಟ್ ಸೇರಿದಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 13 ಜನ ಅಭ್ಯರ್ಥಿಗಳಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಎಂ.ಶಿವಪ್ರಕಾಶ್‌, ‘ಚುನಾವಣೆ ವೇಳೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಫ್ಲ್ಯಾಟ್‌ವೊಂದರಲ್ಲಿ ಸುಮಾರು 10 ಸಾವಿರ ಮತದಾರರ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಆ ಮನೆ ಮುನಿರತ್ನ ಅವರಿಗೆ ಸೇರಿದೆ ಎನ್ನಲಾಗಿದೆ. ಈ ಸಂಬಂಧ ಮುನಿರತ್ನ ಸೇರಿದಂತೆ 10 ಜನರ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದರು’ ಎಂದು ತಿಳಿಸಿದರು.

‘ಚುನಾವಣಾ ಪ್ರಚಾರಕ್ಕೆಂದು ಆಯೋಗ ₹ 25 ಲಕ್ಷ ನಿಗದಿಪಡಿಸಿತ್ತು. ಆದರೆ, ಮುನಿರತ್ನ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಾಗಿ ₹ 3.38 ಲಕ್ಷ ವ್ಯಯಿಸಿದ್ದಾರೆ. ಮತದಾರರಿಗೆ ಸೀರೆ, ಕುಕ್ಕರ್ ಹಂಚಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರ ಶಾಸಕ ಸ್ಥಾನ ಅಸಿಂಧುಗೊಳಿಸಬೇಕು. ಚುನಾವಣೆಯಲ್ಲಿ ಎರಡನೇ ಅತಿ ಹೆಚ್ಚು ಮತ ಗಳಿಸಿರುವ ಅಭ್ಯರ್ಥಿಯನ್ನು ಜಯಶಾಲಿಯಾಗಿ ಘೋಷಿಸಬೇಕು’ ಎಂದು ಕೋರಿದರು.

ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.