ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇಲ್ಲ ಎಂಬ ದೂರುಗಳನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಆದರೆ, ಉನ್ನತ ಶಿಕ್ಷಣ ಅದಕ್ಕಿಂತಲೂ ಕೆಟ್ಟದಾಗಿದೆ ಎಂದರು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಕುಲಪತಿ ಅನುರಾಗ್ ಬೆಹರ್.
ಶೈಕ್ಷಣಿಕ ಮತ್ತು ಸಮಾಜ ಅಧ್ಯಯನ ಕೇಂದ್ರ (ಸಿಇಎಸ್‌ಎಸ್), ನ್ಯಾಕ್ ಹಾಗೂ ರಾಜ್ಯ ಉನ್ನತ ಶಿಕ್ಷಣ ಮಂಡಳಿ (ಕೆಎಸ್‌ಎಚ್‌ಇಸಿ) ಜಂಟಿಯಾಗಿ ನಗರದಲ್ಲಿ ಏರ್ಪಡಿಸಿರುವ ‘ಪದವಿ ಶಿಕ್ಷಣದ ಪುನಶ್ಚೇತನ’ ಕುರಿತ ಕಾರ್ಯಾಗಾರದಲ್ಲಿ ಶನಿವಾರ ಅವರು ಮಾತನಾಡಿದರು.
‘ವಿಶ್ವವಿದ್ಯಾಲಯ ಆಡಳಿತ, ಕುಲಪತಿಗಳ ನೇಮಕ, ಉನ್ನತ ಶಿಕ್ಷಣದ ವಿನ್ಯಾಸ...ಹೀಗೆ ಎಲ್ಲದರಲ್ಲಿಯೂ ಬದಲಾವಣೆ ಆಗಬೇಕಿದೆ. ಒಮ್ಮೆಲೇ ವ್ಯತ್ಯಾಸ ಮಾಡಿದರೆ, ಏನಾಗುತ್ತದೆ ಎನ್ನುವ ಭಯವನ್ನು ಬಿಟ್ಟು, ಸುಧಾರಣೆ ಬಗ್ಗೆ ಗಮನ ನೀಡಬೇಕು’ ಎಂದು ಹೇಳಿದರು.
ಸಿಇಎಸ್‌ಎಸ್ ಅಧ್ಯಕ್ಷ ಎಂ.ಕೆ. ಶ್ರೀಧರ್, ‘ಈಗಿರುವ ಕಾಲೇಜಿನ ರಚನೆಯ ಬಗ್ಗೆ ಮರುಚಿಂತನೆ ನಡೆಸುವ ಅಗತ್ಯವಿದೆ. ಪ್ರಾಂಶುಪಾಲರು, ಉಪಪ್ರಾಂಶುಪಾಲರು, ವಿಭಾಗಗಳು ಹೀಗೆಯೇ ಏಕೆ ಕಾಲೇಜನ್ನು ವಿನ್ಯಾಸಗೊಳಿಸಬೇಕು ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬೇಕು’ ಎಂದು ಹೇಳಿದರು.
‘ಯೋಜನಾ ಆಯೋಗ ಇದ್ದದ್ದು, ನೀತಿ ಆಯೋಗವಾಗಿ ಬದಲಾಯಿತು. ಹೀಗೆ ಸಾಕಷ್ಟು ಸಂಸ್ಥೆಗಳು ರಚನಾತ್ಮಕವಾಗಿ ಬದಲಾಗಿವೆ. ಆದರೆ, ಕಾಲೇಜಿನ ರಚನೆಯನ್ನು ಬದಲಿಸುವ ಬಗ್ಗೆ ನಾವು ಯೋಚಿಸಿಯೇ ಇಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.