ADVERTISEMENT

ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳ ಸುತ್ತಮುತ್ತ ಪ್ರತಿಭಟನೆಗೆ 2 ವಾರ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 11:14 IST
Last Updated 9 ಫೆಬ್ರುವರಿ 2022, 11:14 IST
ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌
ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌   

ಬೆಂಗಳೂರು: ‘ಹಿಜಾಬ್‌–ಕೇಸರಿ ಶಾಲಿನ ‘ವಸ್ತ್ರ ರಾಜಕೀಯ’ ವಿವಾದ ಸಂಘರ್ಷಕ್ಕೆ ತಿರುಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಒಟ್ಟು 14 ದಿನ ಶಾಲೆ ಹಾಗೂ ಕಾಲೇಜುಗಳ ಸನಿಹ ಪ್ರತಿಭಟನೆ ನಡೆಸುವುದನ್ನು ನಿಷೇಧಿಸಲಾಗಿದೆ. ನಿಯಮ ಮೀರಿ ಗುಂಪು ಸೇರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಎಚ್ಚರಿಸಿದ್ದಾರೆ.

‘ಇದೇ 9 ರಿಂದ 22ರವರೆಗೆ ಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು ಮತ್ತು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಸುತ್ತಲಿನ 200 ಮೀಟರ್ಸ್‌ ವ್ಯಾಪ್ತಿಯಲ್ಲಿ ಯಾರೂ ಗುಂಪು ಸೇರುವಂತಿಲ್ಲ. ಈ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಶಾಲೆ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಅವರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಸ್ಥಳೀಯ ಮುಖಂಡರ ಜೊತೆಗೂ ಚರ್ಚಿಸಲಾಗಿದೆ. ಕೆಲವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಜಾಬ್‌–ಕೇಸರಿ ಶಾಲಿನ ವಿಚಾರಕ್ಕಾಗಿ ಯಾರಾದರೂ ಹೋರಾಟಕ್ಕಿಳಿದರೆ ಅವರನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ. ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸದ್ಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹೀಗಿದ್ದರೂ ನಮ್ಮ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ. ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಿದ್ದಾರೆ. ಶಾಲೆ, ಕಾಲೇಜು ಶುರುವಾದ ನಂತರ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.