ADVERTISEMENT

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಶುಲ್ಕ ಏರಿಕೆ ಮಾಡುವುದು ಅನಿವಾರ್ಯ: ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 11:26 IST
Last Updated 18 ಜೂನ್ 2024, 11:26 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಬೆಂಗಳೂರು: ನಗರದಲ್ಲಿ ಕುಡಿಯುವ ನೀರಿನ ಶುಲ್ಕ ಏರಿಕೆ ಮಾಡುವುದು ಅನಿವಾರ್ಯ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬೆಂಗಳೂರಲ್ಲಿ 2014 ರ ಬಳಿಕ ನೀರಿನ ದರ ಏರಿಕೆ ಮಾಡಿಲ್ಲ. ವಿದ್ಯುತ್‌ ದರವೂ ಏರಿಕೆ ಆಗಿದೆ. ಜಲಮಂಡಳಿ ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಹಣವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

‘ಜಲಮಂಡಳಿ ವರ್ಷದಿಂದ ವರ್ಷಕ್ಕೆ ನಷ್ಟಕ್ಕೆ ಗುರಿಯಾಗುತ್ತಲೇ ಇದೆ. ಮಂಡಳಿಯ ವಿದ್ಯುತ್‌ ಬಿಲ್‌ ಕೂಡ ಪಾವತಿ ಮಾಡಲು ಆಗಿಲ್ಲ. ಆದರೆ, ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲೇಬೇಕಲ್ಲ. ಬಿಜೆಪಿಯವರು ಇದ್ದಾಗ ವಿದ್ಯುತ್‌ ದರ ಜಾಸ್ತಿ ಮಾಡಿದರು. ನಾವು ಬಂದು ಕಡಿಮೆ ಮಾಡಿದೆವು. ಕಡಿಮೆ ಮಾಡಿದ್ದಕ್ಕೆ ನೀವು ಪ್ರಶಂಸೆ ಮಾಡುವುದಿಲ್ಲ. ದರ ಹೆಚ್ಚಿಸಿದರೆ ಮಾತ್ರ ಮಾತನಾಡುತ್ತೀರಿ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ದರ ಏರಿಕೆ ಮಾಡಿದರೆ ಜನ ಹೊರೆ ಆಗುತ್ತಿದೆ ಎಂದು ಹೇಳುವುದಿಲ್ಲ. ವಿರೋಧ ಪಕ್ಷಗಳು ಪ್ರತಿಭಟನೆ ಮಾಡುತ್ತವೆ. ಪ್ರತಿಭಟನೆ ಮಾಡದಿದ್ದರೆ, ಆ ಸ್ಥಾನದಲ್ಲಿ ಅವರು ಮುಂದುವರಿಸುವುದು ಕಷ್ಟ‘ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಗಿ ನುಡಿದರು.

‘ನಾಯಕರೊಬ್ಬರು ‘ಜನ ದಂಗೆ ಏಳಬೇಕು‘ ಎಂದು ಕರೆ ಕೊಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವುದು ಅವರ ಉದ್ದೇಶ. ದಂಗೆ ಏಳಿಸಲಿ‘ ಎಂದು ಅವರು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

‘ನಮ್ಮ ನೀರು ನಮ್ಮ ಹಕ್ಕು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನ್ಯಾಯಾಲಯ ಮೇಕೆದಾಟು ಯೋಜನೆ ಬಗ್ಗೆ ತೀರ್ಮಾನ ತೆಗೆದು ಕೊಳ್ಳುತ್ತವೆ. ಕೇಂದ್ರ ಸರ್ಕಾರವೂ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಇದರಿಂದ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ಮೇಕೆದಾಟು ಅಣೆಕಟ್ಟಿನಿಂದ ತಮಿಳುನಾಡಿಗೆ ನಿಗದಿಯಾಗಿರುವ ನೀರಿನ ಪಾಲನ್ನು ನೀಡಲು ಅನುಕೂಲವಾಗುತ್ತದೆ ಹೊರತು ನಮ್ಮ ಕರ್ನಾಟಕದ ಉಪಯೋಗಕ್ಕೆ ಬಳಸುವುದಿಲ್ಲ’ ಎಂದರು.

‘ಶೀಘ್ರದಲ್ಲೇ ವಾರ್ಡ್‌ ಮೀಸಲಾತಿ’

ಲಂಡನ್ ಮಾದರಿಯಲ್ಲಿ ಬಿಬಿಎಂಪಿ ಚುನಾವಣೆ ನಡೆಸಲಾಗುತ್ತದೆಯೇ ಎಂದು ಸುದ್ದಿಗಾರರು ಕೇಳಿದಾಗ, ‘ಅದರ ಬಗ್ಗೆ ಗೊತ್ತಿಲ್ಲ. ಶೀಘ್ರದಲ್ಲೇ ಮೀಸಲಾತಿ ನಿಗದಿ ಮಾಡಿ ಬಿಬಿಎಂಪಿ ಚುನಾವಣೆ ನಡೆಸಲಾಗುವುದು’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘ಬಿಬಿಎಂಪಿಯ ಯಾವ ಆಸ್ತಿಗಳನ್ನೂ ಅಡಮಾನ ಇಡುತ್ತಿಲ್ಲ. ಆಸ್ತಿಗಳ ರಕ್ಷಣೆ ಹಾಗೂ ಎಷ್ಟು ಆಸ್ತಿಗಳಿವೆ ಎನ್ನುವ ಮರು ಸಮೀಕ್ಷೆ, ಗುತ್ತಿಗೆ ನವೀಕರಣ ಸೇರಿದಂತೆ ಇತರೆ ಕೆಲಸಗಳಿಗಾಗಿ ನಮ್ಮ ಅಂದಾಜು ವಿಭಾಗವನ್ನು ಭದ್ರಗೊಳಿಸಿ ದಾಖಲೆಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಬಿಬಿಎಂಪಿಯ ಜಾಹೀರಾತು ಹೊಸ ನೀತಿಯನ್ನು ಒಂದು ವಾರದಲ್ಲಿ ಜಾರಿಗೊಳಿಸಲಾಗುವುದು. ನಮ್ಮ ಮೆಟ್ರೊ ಪಿಲ್ಲರ್‌ಗಳನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ದರ್ಶನ್ ಸೇರಿದಂತೆ ಅನೇಕರು ರಾಜಕಾಲುವೆ ಒತ್ತುವರಿ ತೆರವಿಗೆ ತಡೆಯಾಜ್ಞೆ ತಂದಿರುವ ಪ್ರಕರಣಗಳ ಬಗ್ಗೆ ಕೇಳಿದಾಗ ‘ನಾನು, ನೀನು ಯಾರೇ ತಡೆಯಾಜ್ಞೆ ತಂದಿದ್ದರೂ ತೆರವುಗೊಳಿಸಲಾಗುವುದು’ ಎಂದು ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ: ‘ಗ್ಯಾರಂಟಿ ಯೋಜನೆಗಳು ತಲುಪದೆ ಇರುವವರಿಗೆ ಹಾಗೂ ಸೂಕ್ತ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಬೆಂಗಳೂರಿನ ಸಮಿತಿ ರಚಿಸಲಾಗಿದ್ದು, ಮಾಜಿ ಕಾರ್ಪೊರೇಟರ್‌ ಜಿ. ಕೃಷ್ಣಪ್ಪ ಅವರು ಸಮಿತಿಯ ನೇತೃತ್ವ ವಹಿಸಿಕೊಂಡಿದ್ದಾರೆ. ಬಿಬಿಎಂಪಿಯಲ್ಲಿ ಸಮಿತಿಯ ಕಚೇರಿಯನ್ನು ಉದ್ಘಾಟಿಸಲಾಗಿದೆ’ ಎಂದು ಶಿವಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.