ಬೆಂಗಳೂರು:‘ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗೋವಾ ರಾಜ್ಯದ ಪೊಂಡಾ ನಗರದ ರಾಮನಾಥ ದೇವಸ್ಥಾನದಲ್ಲಿ ಜೂ.12ರಿಂದ 18ರವರೆಗೆ 10ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಲಾಗಿದೆ’ ಎಂದು ಹಿಂದೂ ಜನಜಾಗೃತಿ ಸಮಿತಿ ತಿಳಿಸಿದೆ.
‘ಈ ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ಕಾರ್ಯಪದ್ಧತಿ, ಹಿಂದೂ ರಾಷ್ಟ್ರದಲ್ಲಿ ಆದರ್ಶ ರಾಜ್ಯದ ವ್ಯವಹಾರ ಹೇಗಿರಬೇಕು? ಎಂಬುದರ ಕುರಿತು ಮೂರು ದಿನಗಳ ಹಿಂದೂ ರಾಷ್ಟ್ರ ಸಂಸತ್ತು ನಡೆಯಲಿದೆ. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಸದೀಯ ಮತ್ತು ಸಾಂವಿಧಾನಿಕ ಮಾರ್ಗ, ದೇವಸ್ಥಾನಗಳ ಸುವ್ಯವಸ್ಥಾಪನೆ ಮತ್ತು ಹಿಂದೂ ಶೈಕ್ಷಣಿಕ ಧೋರಣೆಗಳನ್ನು ಹೇಗೆ ಅವಲಂಬಿಸಬೇಕು ಎಂಬ ಚರ್ಚೆಗಳು ನಡೆಯಲಿವೆ’ ಎಂದು ಸುದ್ದಿಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ತಿಳಿಸಿದರು.
‘ಎರಡು ವರ್ಷಗಳ ಕಾಲ ಕೋವಿಡ್‌ನಿಂದಾಗಿ ಅಧಿವೇಶನವನ್ನು ಆನ್‌ಲೈನ್ ಮೂಲಕ ನಡೆಸಲಾಯಿತು. ಆದರೆ ಈ ವರ್ಷ ಅಧಿವೇಶನ ನಡೆಯುತ್ತಿದ್ದು, ಅಮೆರಿಕ, ಇಂಗ್ಲೆಂಡ್, ಹಾಂಗ್‌ಕಾಂಗ್, ಸಿಂಗಾಪುರ, ಫಿಜಿ ಮತ್ತು ನೇಪಾಳ ದೇಶಗಳ ಸಹಿತ ದೇಶದ 26 ರಾಜ್ಯಗಳ 350 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ 1,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.
‘ಕಾಶಿ ಜ್ಞಾನವಾಪಿ ಮಸೀದಿ, ಮಥುರಾ ಮುಕ್ತಿ ಆಂದೋಲನ, ‘ಪ್ಲೇಸಸ್ ಆಫ್ ವರ್ಶಿಪ್ ಆ್ಯಕ್ಟ್’, ಕಾಶ್ಮೀರಿ ಹಿಂದೂಗಳ ನರಮೇಧ, ಮಸೀದಿಗಳಲ್ಲಿ ಧ್ವನಿವರ್ಧಕದಿಂದ ಆಗುವ ಶಬ್ದ ಮಾಲಿನ್ಯ, ಹಿಜಾಬ್ ಆಂದೋಲನ, ಹಲಾಲ್ ಸರ್ಟಿಫಿಕೇಟ್– ಒಂದು ಆರ್ಥಿಕ ಜಿಹಾದ್, ಹಿಂದೂಗಳ ಸಂರಕ್ಷಣೆ, ಮಂದಿರ–ಸಂಸ್ಕೃತಿ ಇತಿಹಾಸ ಇವುಗಳ ರಕ್ಷಣೆ ಮತ್ತು ಮತಾಂತರ ವಿಷಯಗಳ ಕುರಿತು ಚರ್ಚೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಸಿಬಿಐ ಮಾಜಿ ನಿರ್ದೇಶಕ ನಾಗೇಶ್ವರ್ ರಾವ್, ಕಾಶಿ ಜ್ಞಾನವಾಪಿ ಮಸೀದಿಯ ವಿರುದ್ಧ ಕಾನೂನು ಹೋರಾಟ ನಡೆಸಿದ ವಕೀಲ ಹರಿಶಂಕರ್ ಜೈನ್, ವಿಷ್ಣುಶಂಕರ್ ಜೈನ್, ಚಕ್ರವರ್ತಿ ಸೂಲಿಬೆಲೆ, ತರುಣ ಹಿಂದೂ ಸಂಘಟನೆ ಅಧ್ಯಕ್ಷ ನೀಲ್ ಮಾಧವ್, ಭಾರತ ಸೇವಾಶ್ರಮದ ಸಂಘದ ಸ್ವಾಮಿ ಸಂಯುಕ್ತಾನಂದಜೀ ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.