ADVERTISEMENT

ಇತಿಹಾಸ ಸಂಶೋಧಕ, ಲೇಖಕ ಎಚ್.ಎಸ್.ಗೋಪಾಲರಾವ್ ನಿಧನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 15:17 IST
Last Updated 1 ಅಕ್ಟೋಬರ್ 2024, 15:17 IST
ಎಚ್.ಎಸ್. ಗೋಪಾಲರಾವ್
ಎಚ್.ಎಸ್. ಗೋಪಾಲರಾವ್   

ಬೆಂಗಳೂರು/ನೆಲಮಂಗಲ: ಇತಿಹಾಸ ಸಂಶೋಧಕ ಹಾಗೂ ಲೇಖಕ ಎಚ್‌.ಎಸ್‌.ಗೋಪಾಲರಾವ್‌ (78) ಅವರು ಮಂಗಳವಾರ ನಿಧನ ಹೊಂದಿದರು. 

ಅರಿಶಿನಕುಂಟೆ ನಿವಾಸಿಯಾಗಿದ್ದ ಅವರು, ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಮಂಗಳವಾರ ಸಂಜೆ ಅವರ ಅಂತ್ಯಸಂಸ್ಕಾರ ನಡೆಯಿತು. 

ಎಚ್.ಎಸ್. ಗೋಪಾಲರಾವ್ ಅವರು 1946ರ ನವೆಂಬರ್‌ 18ರಂದು ನೆಲಮಂಗಲ ತಾಲ್ಲೂಕಿನ ಹುಲ್ಲೇಗೌಡನಹಳ್ಳಿಯಲ್ಲಿ ಜನಿಸಿದರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿ, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ‘ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಪಿಎಚ್.ಡಿ ಪದವಿ ಪಡೆದಿದ್ದರು.

ADVERTISEMENT

ಗೋಪಾಲರಾವ್ ಅವರು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಲೇ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಇತಿಹಾಸ ಅಕಾಡೆಮಿ, ಬಿ.ಎಂ.ಶ್ರೀ ಪ್ರತಿಷ್ಠಾನ, ಗೋಖಲೆ ಸಾರ್ವಜನಿಕ ಸಂಸ್ಥೆ, ಕನ್ನಡ ಗೆಳೆಯರ ಬಳಗ ಮೊದಲಾದ ಅನೇಕ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. 

ಇತಿಹಾಸಕ್ಕೆ ಸಂಬಂಧಿಸಿದಂತೆ ಅವರು, ‘ನಮ್ಮ ನಾಡು ಕರ್ನಾಟಕ’, ‘ಇತಿಹಾಸದ ಅಧ್ಯಯನ ಅಂದು-ಇಂದು’, ‘ಕರ್ನಾಟಕ ಏಕೀಕರಣ ಇತಿಹಾಸ’ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ‘ಜೇನು ನಂಜು’, ‘ಗತಿ’ ಸೇರಿ ವಿವಿಧ ಕಾದಂಬರಿ, ಮಕ್ಕಳ ನಾಟಕಗಳನ್ನೂ ಬರೆದಿದ್ದಾರೆ.

ಅವರ 150ಕ್ಕೂ ಹೆಚ್ಚು ಲೇಖನಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟಗೊಂಡಿವೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ‘ಬಾ.ರಾ. ಗೋಪಾಲ್ ದತ್ತಿನಿಧಿ ಪ್ರಶಸ್ತಿ’, ‘ಶಂ.ಬಾ ಜೋಶಿ ಸಂಶೋಧನಾ ಪ್ರಶಸ್ತಿ’, ‘ಕರ್ನಾಟಕ ಏಕೀಕರಣ ಇತಿಹಾಸ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಗಳು ಅವರಿಗೆ ಸಂದಿವೆ. ಎರಡನೇ ನೆಲಮಂಗಲ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.