ಬೆಂಗಳೂರು: ‘ಸರ್ಕಾರಿ ಬ್ಯಾಂಕ್‌ಗಳ ಮೂಲಕ ದೇಶದ ಸಾರ್ವಜನಿಕರಿಗೆ ಸೇರಿದ ₹ 14,500 ಕೋಟಿ ನಷ್ವವಾಗಿದೆ. ಆದರೂ ಸಹ ಸಹಕಾರ ಬ್ಯಾಂಕ್‌ಗಳು ಜನರಿಗೆ ಆರ್ಥಿಕ ಭದ್ರತೆ ಒದಗಿಸುತ್ತಿವೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಹೇಳಿದರು.
ನಗರದಲ್ಲಿ ನಡೆದ ಶ್ರೀನಿಧಿ ಸೌಹಾರ್ದ ಸಹಕಾರ ಬ್ಯಾಂಕಿನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದ ಆರ್ಥಿಕತೆಯ ಪುನಶ್ಚೇತನ ಮಾಡುವ ಪ್ರಕ್ರಿಯೆಯಲ್ಲಿ ಸಹಕಾರಿ ಬ್ಯಾಂಕ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಗ್ರಾಮೀಣ ಭಾಗದ ಜನರ ಆರ್ಥಿಕ ವ್ಯವಹಾರಗಳಲ್ಲಿ ಸಹಕಾರ ಸಂಘಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ’ ಎಂದರು.
ಬ್ಯಾಂಕಿನ ಅಧ್ಯಕ್ಷ ಸದಾಶಿವ ರೆಡ್ಡಿ, ‘ಹಲವಾರು ಅಡೆ ತಡೆಗಳ ನಡುವೆಯೂ ಶ್ರೀನಿಧಿ ಬ್ಯಾಂಕ್ ರಜತ ಮಹೋತ್ಸವ ಆಚರಿಸುತ್ತಿದೆ. ಸಂಘದ ಸದಸ್ಯರು ಹಾಗೂ ನಿರ್ದೇಶಕರ ಅವಿರತ ಪರಿಶ್ರಮದಿಂದ ಬ್ಯಾಂಕ್ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ’ ಎಂದರು.
ಇದೇ ಸಂದರ್ಭದಲ್ಲಿ ಶ್ರೀನಿಧಿ ರಜತ ಕುಸುಮ ಸ್ಮರಣಿಕೆ ಬಿಡುಗಡೆಗೊಳಿಸಲಾಯಿತು. ಬ್ಯಾಂಕಿನ ಹಿರಿಯ ಸದಸ್ಯ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೆಂಕಟಪ್ಪ, ಲೇಖಕಿ ಸಂಧ್ಯಾರೆಡ್ಡಿ, ಪತ್ರಕರ್ತ ಆರ್.ಪಿ.ಎಸ್. ರೆಡ್ಡಿ, ಸದಾಶಿವರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ ಚೆನ್ನಾರೆಡ್ಡಿ, ನಿವೃತ್ತ ಪೊಲೀಸ್ ಅಧಿಕಾರಿ ರಾಮಸುಬ್ಬು, ಸಹಕಾರ ಇಲಾಖೆಯ ಎಂ.ವೆಂಕಟರೆಡ್ಡಿ, ಉಪಾಧ್ಯಕ್ಷ ಶಂಕರ ರೆಡ್ಡಿ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಪ್ರವೀಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.