ADVERTISEMENT

ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳದ ಟಿಸಿಎಸ್‌: ಕಂಪನಿಗೆ ಹುಸಿ ಬಾಂಬ್‌ ಕರೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 15:43 IST
Last Updated 15 ನವೆಂಬರ್ 2023, 15:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳದ ಕಾರಣಕ್ಕೆ ಸಿಟ್ಟಿಗೆದ್ದು ಎಲೆಕ್ಟ್ರಾನಿಕ್‌ ಸಿಟಿಯ ಟಿಸಿಎಸ್‌ ಕಂಪನಿಗೆ ಹುಸಿ ಬಾಂಬ್‌ ಕರೆ ಮಾಡಿದ್ದ ಕಂಪನಿಯ ಮಾಜಿ ಉದ್ಯೋಗಿಯನ್ನು ಪರಪ್ಪನ ಅಗ್ರಹಾರ ಪೊಲೀಸ್‌ ಬಂಧಿಸಿ, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಬೆಳಗಾವಿಯ ಶ್ರುತಿ ಶೆಟ್ಟಿ(26) ಹುಸಿ ಬಾಂಬ್‌ ಕರೆ ಮಾಡಿದ್ದ ಮಾಜಿ ಉದ್ಯೋಗಿ.

ಬಿಬಿಎಂ ಪದವಿ ಪಡೆದಿದ್ದ ಶ್ರುತಿ ಶೆಟ್ಟಿ ಅವರು, ಟಿಸಿಎಸ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 2017ರಲ್ಲಿ ಎಂಬಿಎ ವ್ಯಾಸಂಗಕ್ಕಾಗಿ ಕೆಲಸ ಬಿಟ್ಟಿದ್ದರು. ಎಂಬಿಎ ವ್ಯಾಸಂಗ ಮುಗಿದ ಮೇಲೆ ಬೆಳಗಾವಿ ಹಾಗೂ ಬೆಂಗಳೂರಿನ ವಿವಿಧೆಡೆ ಕೆಲಸಕ್ಕೆ ಸೇರಲು ಹುಡುಕಾಟ ನಡೆಸಿದ್ದರು. ಯಾವ ಕಂಪನಿಯಲ್ಲೂ ಕೆಲಸ ಸಿಕ್ಕಿರಲಿಲ್ಲ. ನಂತರ, ಈ ಹಿಂದೆ ಕೆಲಸ ಮಾಡುತ್ತಿದ್ದ ಟಿಸಿಎಸ್ ಸಂಸ್ಥೆಗೇ ಅರ್ಜಿ ಹಾಕಿದ್ದರು. ಆದರೆ, ಕಂಪನಿ ಎರಡನೇ ಬಾರಿ ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿತ್ತು. ಅದರಿಂದ ಸಿಟ್ಟಿಗೆದ್ದ ಅವರು ಮಂಗಳವಾರ ಬೆಳಿಗ್ಗೆ ಕಂಪನಿಗೆ ಕರೆ ಮಾಡಿ, ಸಂಸ್ಥೆಯ ‘ಬಿ’ ಬ್ಲಾಕ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ADVERTISEMENT

‘ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿತ್ತು. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಕಂಪನಿಯ ಎಲ್ಲೆಡೆ ತಪಾಸಣೆ ನಡೆಸಿತು. ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿರಲಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಕರೆ ಎಂಬುದು ತಿಳಿದು ಬಂದಿತ್ತು’ ಎಂದು ಪೊಲೀಸರು ಹೇಳಿದರು.

‘ಕಂಪನಿಯ ಆಡಳಿತ ಮಂಡಳಿ ನೀಡಿದ ದೂರು ಆಧರಿಸಿ ತನಿಖೆ ನಡೆಸಲಾಗಿತ್ತು. ಬೆಳಗಾವಿಯಿಂದ ಕರೆ ಬಂದಿರುವುದು ಗೊತ್ತಾಗಿತ್ತು. ಶ್ರುತಿ ಶೆಟ್ಟಿಗೆ ಕರೆ ಮಾಡಿ ಠಾಣೆಗೆ ಬರುವಂತೆ ಸೂಚನೆ ನೀಡಲಾಗಿತ್ತು. ಪೋಷಕರ ಜತೆಗೆ ಅವರು ಬುಧವಾರ ಠಾಣೆ ಬಂದಿದ್ದರು’

‘ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಹಿಂದೆ ಕೆಲಸ ಮಾಡಿದ್ದ ಕಂಪನಿ ಸಹ ಕೆಲಸ ಕೊಡಲಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಕೆಲಸ ಕೊಡದ ಕಾರಣಕ್ಕೆ ಬೆದರಿಕೆ ಹಾಕಿದ್ದೆ. ಬೇರೆ ಉದ್ದೇಶ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.