ADVERTISEMENT

ವಿಧಾನ ಪರಿಷತ್‌ ಚುನಾವಣೆ | ಚರ್ಚಿಸದೇ ಅಭ್ಯರ್ಥಿ ಆಯ್ಕೆ ಸರಿಯಲ್ಲ: ಜಿ. ಪರಮೇಶ್ವರ

ಸಿಎಂ, ಡಿಸಿಎಂ ನಡೆಗೆ ಪರಮೇಶ್ವರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಮೇ 2024, 15:47 IST
Last Updated 28 ಮೇ 2024, 15:47 IST
ಜಿ.ಪರಮೇಶ್ವರ
ಜಿ.ಪರಮೇಶ್ವರ    

ಬೆಂಗಳೂರು: ‘ವಿಧಾನ ಪರಿಷತ್‌ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಕ್ಷದ ಹಿರಿಯರ ಜತೆ ಚರ್ಚಿಸದೇ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರೇ ತೀರ್ಮಾನಿಸುವುದು ಸರಿಯಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ದೆಹಲಿಗೆ ತೆರಳಿರುವ ಕುರಿತು ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ತಾವೂ ಸೇರಿದಂತೆ ಹಿರಿಯರ ಜತೆ ಸಮಾಲೋಚನೆ ನಡೆಸಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅಭ್ಯರ್ಥಿ ಆಯ್ಕೆ ಕುರಿತು ನಮ್ಮ ಎಲ್ಲ ಹಿರಿಯರ ಜತೆ ಚರ್ಚೆ ಮಾಡಬೇಕು. ಪಕ್ಷದಲ್ಲಿರುವ ಅನುಭವಿಗಳಿಂದ ಸಲಹೆ ಪಡೆಯಬೇಕಿತ್ತು. ಆ ರೀತಿ ಮಾಡದೇ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಬ್ಬರೇ ನಿರ್ಧಾರ ತೆಗೆದುಕೊಂಡರೆ ಸರಿ ಕಾಣುವುದಿಲ್ಲ’ ಎಂದರು.

ADVERTISEMENT

‘ಏಕಾಏಕಿ ಅವರಿಬ್ಬರೇ ಕುಳಿತು ತೀರ್ಮಾನ ಮಾಡಬಾರದು. ಯಾರು ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ ಎಂಬುದನ್ನು ಗಮನಿಸಬೇಕು. ಯಾವ ಸಮುದಾಯಗಳು ನಮ್ಮ ಪಕ್ಷದ ಪರವಾಗಿ ನಿಂತಿವೆ ಎಂಬುದನ್ನೂ ನೋಡಬೇಕು’ ಎಂದು ಹೇಳಿದರು.

ಪಕ್ಷ ಮತ್ತು ಸರ್ಕಾರದಲ್ಲಿ ಇರುವ ಹಿರಿಯರ ಜತೆ ಚರ್ಚಿಸಬೇಕು. ಪಕ್ಷದಲ್ಲಿ ಕೆಲಸ ಮಾಡಿದವರಿಗೆ ಅವಕಾಶ ನೀಡಬೇಕು. ಇದರಿಂದ ಪಕ್ಷಕ್ಕೆ ಅನುಕೂಲ ಆಗುತ್ತದೆ ಎಂದರು.

ಹೈಕಮಾಂಡ್‌ ನಿರ್ಧರಿಸುತ್ತದೆ: ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಶಿವಕುಮಾರ್‌ ಅವರನ್ನು ಬದಲಾವಣೆ ಮಾಡುವ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಆ ವಿಷಯ ನನಗೆ ಗೊತ್ತಿಲ್ಲ. ಅವರು ಸಮರ್ಥರಿದ್ದಾರೆ. ಅಧ್ಯಕ್ಷರಾಗಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಹೊರೆ ಹೆಚ್ಚಾದರೆ ಹೈಕಮಾಂಡ್‌ ಮುಂದೆ ಅವರೇ ಹೇಳುತ್ತಾರೆ. ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.